×
Ad

ಒರಿಸ್ಸಾ ಮುಖ್ಯ ನ್ಯಾಯಮೂರ್ತಿ ವರ್ಗಾವಣೆ: ಪ್ರಸ್ತಾವ ಹಿಂಪಡೆದ ಸುಪ್ರೀಂ ಕೊಲೀಜಿಯಂ

Update: 2023-04-20 21:57 IST

ಹೊಸದಿಲ್ಲಿ, ಎ. 20:   ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲೀಜಿಯಂ ಒರಿಸ್ಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಾ.ಎಸ್. ಮುರಳೀಧರ್ ಅವರನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲು ಮಾಡಿದ ಶಿಫಾರಸನ್ನು ಹಿಂಪಡೆದಿದೆ.

‌ಸರಕಾರದ ಪ್ರತಿಕ್ರಿಯೆಗೆ ಸುಮಾರು ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಶಿಫಾರಸನ್ನು ಹಿಂಪಡೆಯುವ ನಿರ್ಧಾರಕ್ಕೆ ಅದು ಬಂದಿದೆ. ಕೊಲೀಜಿಯಂ ನ್ಯಾಯಮೂರ್ತಿ ಮುರಳೀಧರ್ ಅವರನ್ನು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು 2022 ಸೆಪ್ಟಂಬರ್ 28ರಂದು ಶಿಫಾರಸು ಮಾಡಿತ್ತು.

‘‘ನಾವು ಮಾಡಿದ ಶಿಫಾರಸಿಗೆ ಯಾವುದೇ ಪ್ರತಿಕ್ರಿಯೆ ಇಲ್ಲದೆ ಭಾರತ ಸರಕಾರದಲ್ಲಿ ಬಾಕಿ ಉಳಿದಿದೆ. ಡಾ. ಜಸ್ಟಿಸ್ ಮುರಳೀಧರ ಅವರು ಶಿಫಾರಸು ಮಾಡಿದ ನಾಲ್ಕು ತಿಂಗಳ ಅವಧಿ ಒಳಗೆ 2023 ಆಗಸ್ಟ್ 7ರಂದು ಅಧಿಕಾರ ತ್ಯಜಿಸಿದ್ದಾರೆ. ಈ ವಿಳಂಬದ ಹಿನ್ನೆಲೆಯಲ್ಲಿ ಡಾ. ಜಸ್ಟಿಸ್ ಎಸ್. ಮುರಳೀಧರ ಅವರನ್ನು ವರ್ಗಾಯಿಸುವ ಶಿಫಾರಸನ್ನು ಹಿಂಪಡೆಯಲಾಗಿದೆ’’ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಕೂಡ ಒಳಗೊಂಡ ಸುಪ್ರೀಂ ಕೋರ್ಟ್ ಕೊಲೀಜಿಯಂ ಹೇಳಿದೆ.

ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಕಳೆದ ಆರು ತಿಂಗಳಿಂದ ಖಾಯಂ ಮುಖ್ಯ ನ್ಯಾಯಮೂರ್ತಿ ಇಲ್ಲ. ಬಾಂಬೆ ಉಚ್ಚ ನ್ಯಾಲಯದ ಹಿರಿಯ ನ್ಯಾಯಾಧೀಶ ಎಸ್.ವಿ. ಗಂಗಾಪುರ್ವಾಲಾ ಅವರನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ ಎಂದು ಕೊಲೀಜಿಯಂ ತಿಳಿಸಿದೆ.

ಮದ್ರಾಸ್ ಉಚ್ಚ ನ್ಯಾಯಾಲಯದ ಪ್ರಸಕ್ತ ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿ ಟಿ. ರಾಜಾ ಅವರನ್ನು ರಾಜಸ್ಥಾನದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಗಿದೆ ಎಂದು ಕೊಲೀಜಿಯಂ ತಿಳಿಸಿದೆ. 

Similar News