×
Ad

ಅಕಾಲಿಕ ಮಳೆ: ಹಾಳಾದ ಈರುಳ್ಳಿ ಬೆಳೆ

Update: 2023-04-21 10:19 IST

ನಾಸಿಕ್: ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ಬಿದ್ದ ಅಕಾಲಿಕ ಮಳೆ ಹಾಗೂ ಆಲಿಕಲ್ಲಿನಿಮದ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ನಾಶವಾಗಿದೆ ಎಂದು ರಾಜ್ಯ ಕೃಷಿ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ಇದರಿಂದಾಗಿ ಬೇಸಿಗೆ ಹಂಗಾಮಿನ ಈರುಳ್ಳಿ ಉತ್ಪಾದನೆ 56 ಲಕ್ಷ ಮೆಟ್ರಿಕ್ ಟನ್‌ನಷ್ಟು ಕುಸಿತವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈರುಳ್ಳಿಯ ಬಾಳಿಕೆಯ ಮೇಲೂ ಇದು ಪರಿಣಾಮ ಬೀರಲಿದ್ದು, ಆಗಸ್ಟ್ ಮಧ್ಯದ ವೇಳೆಗೆ ಈರುಳ್ಳಿ ಅಭಾವಕ್ಕೆ ಕಾರಣವಾಗುವ ನಿರೀಕ್ಷೆ ಇದೆ. ಅಧಿಕಾರಿಗಳ ಪ್ರಕಾರ ಈರುಳ್ಳಿ ಸುಮಾರು ಆರು ತಿಂಗಳು ಹಾಳಾಗದೇ ಉಳಿಯುತ್ತದೆ. ಆದರೆ ಈ ಬಾರಿ ಮಳೆಯ ಕಾರಣದಿಂದಾಗಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಈರುಳ್ಳಿಯನ್ನು ದಾಸ್ತಾನು ಮಾಡಿ ಇಡುವಂತಿಲ್ಲ.

ನಾಸಿಕ್‌ನಲ್ಲಿ ಸಾಮಾನ್ಯವಾಗಿ ಒಂದು ಎಕರೆ ಪ್ರದೇಶದಲ್ಲಿ 23 ಮೆಟ್ರಿಕ್ ಟನ್ ಈರುಳ್ಳಿ ಇಳುವರಿ ಸಿಗುತ್ತದೆ. ಬೇಸಿಗೆ ಹಂಗಾಮಿನಲ್ಲಿ ಉತ್ಪಾದನೆಯಾಗುವ ದೇಶದ ಒಟ್ಟು ಈರಳ್ಳಿಯ ಪೈಕಿ ಮಹಾರಾಷ್ಟ್ರದ ಪಾಲು ಶೇಕಡ 40ರಷ್ಟಿದ್ದು, ರಾಜ್ಯದ ಒಟ್ಟು ಉತ್ಪಾದನೆಗೆ ನಾಸಿಕ್ ಶೇಕಡ 50ರಷ್ಟು ಕೊಡುಗೆ ನೀಡುತ್ತದೆ. ಈ ಬಾರಿ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು, ಇಳುವರಿ ಪ್ರತಿ ಎಕರೆಗೆ 18 ಟನ್‌ಗೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.

Similar News