ದಿಲ್ಲಿಯ ಸಾಕೇತ್ ನ್ಯಾಯಾಲಯದ ಸಂಕೀರ್ಣದೊಳಗೆ ಮಹಿಳೆಯ ಮೇಲೆ ಗುಂಡು ಹಾರಾಟ
ಹೊಸದಿಲ್ಲಿ: ಇಂದು ಬೆಳಗ್ಗೆ ದಿಲ್ಲಿಯ ನ್ಯಾಯಾಲಯದ ಸಂಕೀರ್ಣದೊಳಗೆ ನಡೆದ ಗುಂಡಿನ ದಾಳಿಯ ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದು, ಕೂಡಲೇ ಅಲ್ಲಿದ್ದ ಪೊಲೀಸ್ ಅಧಿಕಾರಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕೇತ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ.
ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಗಾಗಿ ಮಹಿಳೆ ನ್ಯಾಯಾಲಯದಲ್ಲಿದ್ದಾಗ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ.
ನೈಋತ್ಯ ದಿಲ್ಲಿಯ ದ್ವಾರಕಾದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಕೀಲರೊಬ್ಬರನ್ನು ಗುಂಡಿಕ್ಕಿ ಕೊಂದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ದಾಳಿಕೋರರು ನ್ಯಾಯಾಲಯಕ್ಕೆ ಪ್ರವೇಶಿಸಲು ವಕೀಲರಂತೆ ಪೋಸ್ ನೀಡಿದ್ದರು.
ಎರಡು ವರ್ಷಗಳೊಳಗೆ ದಿಲ್ಲಿಯ ನ್ಯಾಯಾಲಯದ ಸಂಕೀರ್ಣದಿಂದ ವರದಿಯಾದ ಎರಡನೇ ಗುಂಡಿನ ದಾಳಿಯ ಘಟನೆ ಇದಾಗಿದೆ.