ಸಿದ್ದರಾಮಯ್ಯರಿಂದ ಶಾರುಖ್‌ ಖಾನ್‌ವರೆಗೆ.. ಟ್ವಿಟರ್‌ ಬ್ಲೂಟಿಕ್‌ ಸೇವೆ ಕಳೆದುಕೊಂಡ ಗಣ್ಯರು

Update: 2023-04-21 07:04 GMT

ಹೊಸದಿಲ್ಲಿ: ಬ್ಲೂಟಿಕ್‌ (ನೀಲಿ ಗುರುತು) ಸೇವೆಯನ್ನು ಪಡೆಯಲು ಶುಲ್ಕ ಪಾವತಿಸದ ಎಲ್ಲಾ ಖಾತೆಗಳಿಂದಲೂ ಬ್ಲೂಟಿಕ್‌ ಅನ್ನು ಟ್ವಿಟರ್ (Twitter) ತೆಗೆದು ಹಾಕಿದೆ.

ಈ ನೂತನ ಬೆಳವಣಿಗೆಯಿಂದ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಆಲಿಯಾ ಭಟ್‌ರಂತಹ ಬಾಲಿವುಡ್ ತಾರೆಗಳು ಸೇರಿದಂತೆ ರಾಜಕಾರಣಿಗಳಾದ ಆದಿತ್ಯನಾಥ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮವರೆಗೆ ಟ್ವಿಟರ್ ಬ್ಲೂಟಿಕ್‌ ಅನ್ನು ತಮ್ಮ ಖಾತೆಗಳಿಂದ ಕಳೆದುಕೊಂಡಿದ್ದಾರೆ.

ಬಿಜೆಪಿ ಕರ್ನಾಟಕದ ಅಧಿಕೃತ ಖಾತೆ, ಸಿದ್ದರಾಮಯ್ಯ, ಬಿಎಸ್‌ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಸೇರಿದಂತೆ  ರಾಜ್ಯದ ಹಲವು ಪ್ರಮುಖ ಖಾತೆಗಳ ಬ್ಲೂಟಿಕ್‌ ಕೂಡಾ ಹೋಗಿದೆ. ಆದರೆ, ಬಿವೈ ವಿಜಯೇಂದ್ರ, ಎಂಬಿ ಪಾಟೀಲ್‌, ಸಚಿವ ಅಶ್ವಥನಾರಾಯಣ, ರೇಣುಕಾಚಾರ್ಯ, ಕೃಷ್ಣ ಭೈರೇಗೌಡ, ಗೋವಿಂದ ಕಾರಜೋಳ ಮೊದಲಾದವರ ಬ್ಲೂಟಿಕ್‌ ಹಾಗೇ ಉಳಿದುಕೊಂಡಿದೆ.

ಎಲಾನ್‌ ಮಸ್ಕ್‌ ಟ್ವಿಟರನ್ನು ಖರೀದಿಸಿದ ಬಳಿಕ, ಬ್ಲೂಟಿಕ್‌ ಸೇವೆಗೆ ಶುಲ್ಕ ವಿಧಿಸಲಾಗಿತ್ತು. ಆಂಡ್ರಾಯ್ಡ್ ಫೋನ್ ಅಥವಾ ಐಫೋನ್‌ ಬಳಕೆದಾರರು ಪ್ರತಿ ತಿಂಗಳು 11 ಡಾಲರ್ ಹಾಗೂ ವೆಬ್ ಬಳಕೆದಾರರಿಗೆ 8 ಡಾಲರ್ ಪಾವತಿಸಬೇಕಿದೆ.   

ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸುವ ಮುನ್ನ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ನೀಲಿ ಗುರುತು ಅಥವಾ ವ್ಯಾಪಾರಕೇಂದ್ರಿತ ಪರಿಶೀಲನೆಗೊಳಗಾದ ಟ್ವಿಟರ್ ಖಾತೆಗೆ ಚಂದಾದಾರರಾಗದಿದ್ದರೆ ಅಂಥ ಎಲ್ಲ ಗಣ್ಯರ ಖಾತೆಗಳ ಮುಂದಿರುವ ಬ್ಲೂಟಿಕ್‌ ಅನ್ನು ತೆಗೆದು ಹಾಕುವುದಾಗಿ ಪ್ರಕಟಿಸಿತ್ತು. 

ಆರಂಭದಲ್ಲಿ ಗಣ್ಯ ವ್ಯಕ್ತಿಗಳನ್ನು ನಕಲಿ ಖಾತೆಗಳಿಂದ ರಕ್ಷಿಸಲು ಹಾಗೂ ಅವರ ಹೆಸರಲ್ಲಿ ನಕಲಿ ಮಾಹಿತಿ ಹರಡುವುದನ್ನು ತಡೆಯಲು ಬ್ಲೂಟಿಕ್‌ ಪರಿಶೀಲನೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಮಾರ್ಚ್ ತಿಂಗಳಲ್ಲಿ ಎಪ್ರಿಲ್ 1ರಿಂದ ಗಣ್ಯರ ಪರಿಶೀಲನೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗುವುದು ಮತ್ತು ಗಣ್ಯರ ಪರಿಶೀಲನಾ ಗುರುತನ್ನು ತೆಗೆದು ಹಾಕಲಾಗುವುದು ಎಂದು ಟ್ವಿಟರ್ ಪ್ರಕಟಿಸಿತ್ತು. ಒಂದು ವೇಳೆ ಬ್ಲೂಟಿಕ್‌ ಉಳಿಸಿಕೊಳ್ಳಲು ಬಯಸುವ ಯಾವುದೇ ಖಾಸಗಿ ವ್ಯಕ್ತಿ ಇದೀಗ ಬ್ಲೂಟಿಕ್ ಚಂದಾದಾರಿಕೆಗಾಗಿ ನೋಂದಾಯಿಸಿಕೊಳ್ಳಬೇಕಿದೆ.

Similar News