ಪುಲ್ವಾಮಾ: ಹುತಾತ್ಮ ಯೋಧರ ಬಲಿದಾನಕ್ಕೆ ನ್ಯಾಯ ಸಿಗಲಿ

Update: 2023-04-22 04:48 GMT

2019ರಂದು ಪುಲ್ವಾಮಾದಲ್ಲಿ ನಮ್ಮ ಯೋಧರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಗೆ 40ಕ್ಕೂ ಅಧಿಕ ಯೋಧರು ಮೃತಪಟ್ಟರು. ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಸಿಆರ್‌ಪಿಎಫ್ ಯೋಧರು ತುಂಬಿದ್ದ ಟ್ರಕ್‌ನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಆದರೆ ಈ ದಾಳಿಯ ಹಿಂದಿರುವ ಶಕ್ತಿಯ ಬಗ್ಗೆ ಈವರೆಗೆ ಗಂಭೀರ ತನಿಖೆ ನಡೆದೇ ಇಲ್ಲ. ದಾಳಿಯೇನೋ ಉಗ್ರರಿಂದ ನಡೆದಿದೆ ಎಂದು ಸರಕಾರ ಘೋಷಿಸಿತು.

ಭದ್ರತಾ ವೈಫಲ್ಯವೇ ಇಂತಹದೊಂದು ದಾಳಿಗೆ ಕಾರಣ ಎಂಬ ಆರೋಪ ಕೇಳಿ ಬಂತು. ಚುನಾವಣೆಯ ದೃಷ್ಟಿಯಿಂದ ಸರಕಾರವೇ ಇಂತಹದೊಂದು ದಾಳಿಯ ಪ್ರಾಯೋಜಕತ್ವವನ್ನು ವಹಿಸಿತೆ ಎನ್ನುವ ಪ್ರಶ್ನೆಯೂ ಎದ್ದಿತು. ಇದೇ ಸಂದರ್ಭದಲ್ಲಿ, ಮೃತಪಟ್ಟ ಸೈನಿಕರನ್ನು ಬಿಜೆಪಿ ತನ್ನ ಚುನಾವಣೆಗೆ ಬಳಸಿಕೊಳ್ಳುವ ಮೂಲಕ ಅವರ ಬಲಿದಾನವನ್ನು ಅವಮಾನಿಸಿತು ಎನ್ನುವ ಟೀಕೆಗಳು ಕೇಳಿ ಬಂದವು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಪಕ್ಷದ ಕಾರ್ಯಕರ್ತರು ಸೈನಿಕರ ವೇಷ ಧರಿಸಿ ಮತಯಾಚನೆ ಮಾಡುವ ದೃಶ್ಯಗಳು ವರದಿಯಾಗಿದ್ದವು. ಹಲವು ನಿವೃತ್ತ ಸೇನಾ ಅಧಿಕಾರಿಗಳು ಪುಲ್ವಾಮಾ ದಾಳಿಯಲ್ಲಿ ಸರಕಾರದ ವೈಫಲ್ಯವನ್ನು ಬೆಟ್ಟು ಮಾಡಿ ತೋರಿಸಿದ್ದರು.

ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ನಡೆದಿರುವ ಭದ್ರತಾ ವೈಫಲ್ಯಕ್ಕಾಗಿ ಸರಕಾರ ಕ್ಷಮೆಯಾಚಿಸಬೇಕಾಗಿತ್ತು. ರಕ್ಷಣಾ ಸಚಿವರು ಆ ದುರಂತಕ್ಕಾಗಿ ರಾಜೀನಾಮೆಯನ್ನು ನೀಡಬೇಕಾಗಿತ್ತು. ಆದರೆ ಅಂತಹದ್ಯಾವುದೂ ಸಂಭವಿಸಲೇ ಇಲ್ಲ. ಇದೀಗ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಬಹಿರಂಗ ಪಡಿಸಿದ ಸ್ಫೋಟಕ ಮಾಹಿತಿಗಳು ಪುಲ್ವಾಮಾ ದಾಳಿಯ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟಿಸಿ ಹಾಕಿವೆ. ಪುಲ್ವಾಮಾ ದಾಳಿಗೆ ಗೃಹ ಸಚಿವಾಲಯದ ವೈಫಲ್ಯ ಕಾರಣ ಎಂದು ದುರಂತ ನಡೆದ ಸಂದರ್ಭದಲ್ಲಿ ಅಂದಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದರು. ಆದರೆ ಪ್ರಧಾನಿ ಮೋದಿ, ರಾಜ್ಯಪಾಲರಿಗೆ ವೌನವಹಿಸುವಂತೆ ಆದೇಶ ನೀಡಿದ್ದರು ಎನ್ನುವುದು ಮಲಿಕ್ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗವಾಗಿದೆ.

ಪುಲ್ವಾಮಾ ದಾಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಪ್ತಚರ ವೈಫಲ್ಯ ಉಂಟಾಗಿರುವುದನ್ನು ನಿರ್ಲಕ್ಷಿಸಲಾಗಿದೆ. ಸಿಆರ್‌ಪಿಎಫ್ ತನ್ನ ಸೈನಿಕರ ಸಾಗಾಟಕ್ಕೆ ವಿಮಾನ ಸೌಲಭ್ಯವನ್ನು ಕೇಳಿತ್ತಾದರೂ, ಅದನ್ನು ಕೇಂದ್ರ ಗೃಹ ಸಚಿವಾಲಯ ನಿರ್ಲಕ್ಷಿಸಿತ್ತು. ಸೈನಿಕರು ಸಾಗುವ ಹೆದ್ದಾರಿಯ ಭದ್ರತೆಯ ಪರಿಶೀಲನೆಯೇ ನಡೆದಿರಲಿಲ್ಲ. ಇವೆಲ್ಲದರ ಬಗ್ಗೆ ಪ್ರಧಾನಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಮಾಜಿ ರಾಜ್ಯಪಾಲರು ತಿಳಿಸಿದ್ದರು. ಆದರೆ ಅವರಿಗೆ ಬಾಯಿ ಮುಚ್ಚಿಕೊಂಡಿರಲು ಆದೇಶಿಸಲಾಯಿತು. ಈ ದಾಳಿ ಪಾಕಿಸ್ತಾನದಲ್ಲಿರುವ ಉಗ್ರರಿಂದ ಸಂಭವಿಸಿದೆ ಎಂದು ಹೇಳಿ ಕೇಂದ್ರ ಸರಕಾರ ಕೈ ತೊಳೆದುಕೊಂಡಿತು. ಆದರೆ, ಭಾರತದ ಭೂಪ್ರದೇಶದಲ್ಲಿ, ಇಂತಹದೊಂದು ದಾಳಿಯನ್ನು ಪ್ರಾಯೋಜಿಸಲು ಭಯೋತ್ಪಾದಕರಿಗೆ ಸಹಕರಿಸಿದವರು ಯಾರು? ಎನ್ನುವುದು ಗುಟ್ಟಾಗಿಯೇ ಉಳಿಯಿತು. ಇದೀಗ ಮಲಿಕ್ ಅವರ ಹೇಳಿಕೆಯಿಂದ ಒಂದು ಸ್ಪಷ್ಟವಾಗುತ್ತದೆ. ಸರಕಾರಕ್ಕೂ ಅದು ಬಹಿರಂಗವಾಗುವುದು ಬೇಕಾಗಿರಲಿಲ್ಲ.

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ದೊಡ್ಡ ಪ್ರಮಾಣದ ಉಗ್ರರನ್ನು ಕೊಂದು ಹಾಕಿದ್ದೇವೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿತು. ಆದರೆ, ಆ ದಾಳಿಯಲ್ಲಿ ಸತ್ತ ಉಗ್ರರೆಷ್ಟು, ಪಾಕಿಸ್ತಾನಕ್ಕಾದ ಹಾನಿಯೆಷ್ಟು ಎನ್ನುವುದರ ಬಗ್ಗೆ ಈವರೆಗೆ ಯಾವುದೇ ವಿವರಗಳು ಸಿಕ್ಕಿಲ್ಲ. ನಮ್ಮದೇ ಯೋಧನೊಬ್ಬ ಪಾಕಿಸ್ತಾನದ ಕೈ ಸೆರೆಯಾಗಿ ಭಾರತ ಇನ್ನೂ ಒಂದಿಷ್ಟು ಮುಜುಗರವನ್ನು ಎದುರಿಸಿತು. ಪುಲ್ವಾಮಾ ದಾಳಿಗೆ ಪಾಕಿಸ್ತಾನ ಎಷ್ಟು ಹೊಣೆಯೋ, ಆ ದಾಳಿಗೆ ಮುಕ್ತ ವಾತಾವರಣವೊಂದನ್ನು ಸೃಷ್ಟಿಸಿ ಕೊಟ್ಟ ಗೃಹ ಸಚಿವಾಲಯವೂ ಅಷ್ಟೇ ಹೊಣೆ ಎನ್ನುವುದು ಮಲಿಕ್ ಅವರ ಆರೋಪಗಳಿಂದ ಸ್ಪಷ್ಟವಾಗುತ್ತದೆ. ಹುತಾತ್ಮರ ಸಾವು ನೋವುಗಳು ಯಾಕಾಗಿ ಸಂಭವಿಸಿತು ಎನ್ನುವ ಪ್ರಶ್ನೆಯನ್ನು ದೇಶ ಮತ್ತೆ ಕೇಳುತ್ತಿದೆ. ಸತ್ಯಪಾಲ್ ಮಲಿಕ್ ಆರೋಪಗಳಿಗೆ ಈವರೆಗೆ ಸರಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇದೀಗ ''ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿರುವ ಸತ್ಯವನ್ನು ಬಹಿರಂಗಗೊಳಿಸಿ'' ಎಂದು ಹುತಾತ್ಮ ಯೋಧರ ಕುಟುಂಬಗಳು ಆಗ್ರಹಿಸುತ್ತಿವೆ. ಈ ಯೋಧರ ಕುಟುಂಬದ ಬೇಡಿಕೆಗಾದರೂ ಕೇಂದ್ರ ಸರಕಾರ ಕಿವಿಯಾಗಬೇಕಾಗಿದೆ. ತಮ್ಮ ಕುಟುಂಬದ ಆಪ್ತರನ್ನು ಕಳೆದುಕೊಂಡರೂ ಅವರಿಗಿದ್ದ ಒಂದೇ ಸಮಾಧಾನವೆಂದರೆ, ಈ ದೇಶಕ್ಕಾಗಿ ಅವರು ಹುತಾತ್ಮರಾದರು ಎನ್ನುವುದು. ಆದರೆ ಈ ದೇಶದ ಕೆಟ್ಟ ಆಡಳಿತದ ಕಾರಣಕ್ಕಾಗಿ ತಮ್ಮ ಮನೆಯ ಮಕ್ಕಳನ್ನು ಕಳೆದುಕೊಳ್ಳಬೇಕಾಯಿತು ಎಂದಾದರೆ ಆ ನೋವನ್ನು ಅವರು ಸಹಿಸುವುದಾದರೂ ಹೇಗೆ? ಈ ಕಾರಣಕ್ಕಾಗಿ ಅವರಿಗೆ ಕೇಂದ್ರ ಸರಕಾರ ಸ್ಪಷ್ಟೀಕರಣವನ್ನು ನೀಡಲೇ ಬೇಕಾಗಿದೆ.

ವಿಪರ್ಯಾಸವೆಂದರೆ, ಇತ್ತೀಚಿನ ದಿನಗಳಲ್ಲಿ ಸೇನೆಯ ಸೈನಿಕರು ಕಾರಣವಿಲ್ಲದೆಯೇ ಪ್ರಾಣಗಳನ್ನು ತೆರುತ್ತಿದ್ದಾರೆ. ಪಂಜಾಬಿನ ಬಠಿಂಡಾದ ಸೇನಾ ನೆಲೆಯೊಂದರಲ್ಲಿ ನಾಲ್ವರು ಸೈನಿಕರು ಗುಂಡೇಟಿಗೆ ಬಲಿಯಾದರು. ಆರಂಭದಲ್ಲಿ ಇದನ್ನು 'ಭಯೋತ್ಪಾದಕರ ಕೃತ್ಯ' ಎಂದು ಕರೆಯಲಾಯಿತು. ಮಾಧ್ಯಮಗಳೂ ಹಾಗೆಯೇ ವಿಶ್ಲೇಷಿಸಿದವು. ಆದರೆ ತನಿಖೆ ಮುಂದುವರಿದಂತೆಯೇ ಸಹೋದ್ಯೋಗಿ ಸೈನಿಕನೇ ಈ ಕೃತ್ಯ ಎಸಗಿರುವುದದು ಬೆಳಕಿಗೆ ಬಂತು. ಸೈನಿಕನಾದರೂ ಇಂತಹದೊಂದು ಕೃತ್ಯ ಯಾಕೆ ಎಸಗಿದ? ಆತನ ಸಹೋದ್ಯೋಗಿಗಳೇ ಆತನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಿರುವುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂತು. ಅದರಿಂದ ಆಕ್ರೋಶಗೊಂಡು ಆತ ಅವರನ್ನು ಗುಂಡಿಟ್ಟುಕೊಂದಿದ್ದಾನೆ.

ಇದು ಸೇನೆಯೊಳಗೆ ಅಪರೂಪಕ್ಕೆ ನಡೆಯುತ್ತಿರುವ ಕೃತ್ಯಗಳಲ್ಲ. ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದು ಹಾಕುವ ಪ್ರಕರಣಗಳು ಸೇನೆಯಲ್ಲಿ ಹೆಚ್ಚುತ್ತಿವೆ. ಆತ್ಮಹತ್ಯೆಯಂತಹ ಪ್ರಕರಣಗಳು ಕೂಡ ಅಧಿಕವಾಗುತ್ತಿವೆ. ಸೇನೆಯೊಳಗೆ ನಡೆಯುವ ಕೃತ್ಯಗಳು ರಾಷ್ಟ್ರದ ಭದ್ರತೆಯ ಹೆಸರಿನಲ್ಲಿ ಗಂಭೀರವಾಗಿ ತನಿಖೆಯಾಗುವುದಿಲ್ಲ. ಅನೇಕ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಕುಮ್ಮಕ್ಕಿನಿಂದ ಅವುಗಳನ್ನು ಮುಚ್ಚಿ ಹಾಕಲಾಗುತ್ತದೆ ಎನ್ನುವ ಆರೋಪಗಳಿವೆ. ಇವೆಲ್ಲವು ಅಂತಿಮವಾಗಿ ಸೇನೆ ವರ್ಚಸ್ಸಿನ ಮೇಲೆ ಪರಿಣಾಮ ಬೀರಬಹುದು. ಸೇನೆ ಸೇರುವ ಬಗ್ಗೆ ಯುವಕರು ಹಲವು ಬಾರಿ ಯೋಚಿಸುವಂತೆ ಮಾಡಬಹುದು. ಈ ಕಾರಣದಿಂದಲೇ, ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ನ್ಯಾಯ ದೊರಕಬೇಕಾಗಿದೆ. ಯಾರ ಬೇಜವಾಬ್ದಾರಿಗಾಗಿ ನಮ್ಮ ಸೈನಿಕರು ಪ್ರಾಣವನ್ನು ತೆರಬೇಕಾಯಿತು ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಈ ದೇಶದ ಜನರಿಗಿದೆ. ಮಾಜಿ ರಾಜ್ಯಪಾಲರ ಆರೋಪದ ಬಗ್ಗೆ ಸರಕಾರ ತುಟಿ ಬಿಚ್ಚಬೇಕು. ಈ ಸಾವುನೋವುಗಳ ಹಿಂದಿರುವ ಭದ್ರತಾ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಪ್ರಧಾನಿ ಈ ದುರಂತಕ್ಕಾಗಿ ಇನ್ನಾದರೂ ದೇಶದ ಕ್ಷಮೆ ಯಾಚಿಸಬೇಕು.

Similar News