ಕಳವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಬ್ಯಾಟ್ ಗಳು ಬೆಂಗಳೂರಿನಲ್ಲಿ ಪತ್ತೆ

Update: 2023-04-22 07:27 GMT

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಬ್ಯಾಟ್ ಹಾಗೂ ಇತರ ಸಾಮಗ್ರಿಯ ಕಳ್ಳತನ ಪ್ರಕರಣವನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಭೇದಿಸಿದ್ದಾರೆ.

ಎಪ್ರಿಲ್ 15 ರಂದು ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಐಪಿಎಲ್ ಟಿ-20 ಪಂದ್ಯ ನಡೆದಿತ್ತು.

ಪಂದ್ಯ ಮುಗಿಸಿದ್ದ ಡೆಲ್ಲಿ ತಂಡದ ಆಟಗಾರರು ದಿಲ್ಲಿಗೆ ವಾಪಸ್ ಹೋಗಿದ್ದರು.

ತಂಡದ ಆಟಗಾರರೆಲ್ಲರೂ ದಿಲ್ಲಿ ಹೋಟೆಲ್ ತಲುಪಿದಾಗ ಬ್ಯಾಗ್ ತೆರೆದು ನೋಡಿದ್ದರು. ಆದರೆ ಕೆಲವು ಆಟಗಾರರ ಬ್ಯಾಗ್ ನಲ್ಲಿ ಬ್ಯಾಟ್, ಶೂ, ಗ್ಲೌಸ್ ಹಾಗೂ ಇತರೆ  ಕ್ರೀಡಾ ಸಾಮಗ್ರಿಗಳು ಇರಲಿಲ್ಲ.

ಡೇವಿಡ್ ವಾರ್ನರ್, ಫಿಲ್ ಸಾಲ್ಟ್ ಹಾಗೂ ಮಿಚೆಲ್ ಮಾರ್ಷ್ ಅವರ ಬ್ಯಾಟ್ ಗಳು ಕಳೆದುಹೋಗಿದ್ದವು. ಈ ಬ್ಯಾಟ್ ಗಳ ಮೌಲ್ಯ ತಲಾ 1 ಲಕ್ಷ ರೂ. ಆಗಿತ್ತು.

ಕಳ್ಳತನಕ್ಕೆ ಸಂಬಂಧಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಟ್ರಾವಲ್ಸ್ ಕಂಪೆನಿಗೆ ದೂರು ನೀಡಿದ್ದರು. ಡೇವಿಡ್ ವಾರ್ನರ್ ಸಹ ಕಳ್ಳತನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಪ್ರಕಟಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಬ್ಬನ್ ಪಾರ್ಕ್ ಪೊಲೀಸರು ಬ್ಯಾಟ್ ಹಾಗೂ ಇತರೆ ಕ್ರೀಡಾ ಸಾಮಗ್ರಿಗಳನ್ನು ಪತ್ತೆ ಮಾಡಿದ್ದಾರೆ. ಅವೆಲ್ಲವೂ ಎಲ್ಲಿ ಸಿಕ್ಕವು? ಕದ್ದವರು ಯಾರು? ಎಂಬ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ.

Similar News