ದಿಲ್ಲಿಯಲ್ಲಿರುವ ಅಧಿಕೃತ ಬಂಗಲೆ ತೊರೆದ ರಾಹುಲ್ ಗಾಂಧಿ
ಹೊಸದಿಲ್ಲಿ: ಕಳೆದ ತಿಂಗಳು ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ತುಘಲಕ್ ಲೇನ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದರು.
ಶನಿವಾರದಂದು ಸಾರ್ವಜನಿಕ ರಜಾ ದಿನವಾದ ಕಾರಣ ಬಂಗಲೆಯ ಕೀಲಿಕೈಗಳನ್ನು ಲೋಕಸಭೆಯ ಸೆಕ್ರೆಟರಿಯೇಟ್‌ಗೆ ಹಸ್ತಾಂತರಿಸಲು ರಾಹುಲ್ ಗಾಂಧಿ ಅವರಿಗೆ ಸಾಧ್ಯವಾಗಲಿಲ್ಲ. ಅನರ್ಹಗೊಂಡ ನಂತರ ರಾಹುಲ್ ಗೆ ಬಂಗಲೆಯನ್ನು ಖಾಲಿ ಮಾಡಲು ಎಪ್ರಿಲ್ 22 ಕೊನೆಯ ದಿನವಾಗಿತ್ತು.
ಸಂಸತ್ತಿನ ಕೆಳಮನೆಯ ಸಂಸದರಾಗಿ ರಾಹುಲ್ ಅವರನ್ನು ಅನರ್ಹಗೊಳಿಸಿದ ನಂತರ ಬಿಜೆಪಿ ಸಂಸದ ಸಿಆರ್ ಪಾಟೀಲ್ ನೇತೃತ್ವದ ಲೋಕಸಭೆಯ ವಸತಿ ಸಮಿತಿಯು 2005 ರಿಂದ ರಾಹುಲ್ ನೆಲೆಸಿದ್ದ 12 ತುಘಲಕ್ ಲೇನ್ ಬಂಗಲೆಯನ್ನು ಎ.22ರೊಳಗೆ ತೆರವು ಮಾಡುವಂತೆ ಪತ್ರವನ್ನು ಕಳುಹಿಸಿತ್ತು.
ಇದೊಂದು ಕೇಂದ್ರ ಸರಕಾರದ ರಾಜಕೀಯ ಸೇಡು ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಶುಕ್ರವಾರ ಮುಂಜಾನೆ ರಾಹುಲ್ ತಮ್ಮ ಬಂಗಲೆಯ ಸಾಮಾನುಗಳನ್ನು ಹೊರಕ್ಕೆ ಸ್ಥಳಾಂತರಿಸಿದ್ದರು. ಸದ್ಯ, ಅವರು ತಮ್ಮ ತಾಯಿ ಸೋನಿಯಾ ಗಾಂಧಿಯೊಂದಿಗೆ ವಾಸಿಸುತ್ತಿದ್ದಾರೆ.ಬೇರೊಂದು ಮನೆಯನ್ನು ಹುಡುಕುತ್ತಿದ್ದಾರೆ.