ಪೂಂಚ್ ಜಿಲ್ಲೆಯ ಗ್ರಾಮಸ್ಥರಿಂದ ಇಂದು ಈದ್ ಆಚರಿಸದೇ ಇರಲು ನಿರ್ಧಾರ: ಕಾರಣವೇನು ಗೊತ್ತೇ?
ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಸಂಗಿಯೋಟೆ ಎಂಬ ಪುಟ್ಟ ಗ್ರಾಮದ ಜನರು ಈ ವರ್ಷ ಈದ್ ಆಚರಿಸುತ್ತಿಲ್ಲ. ಕಳೆದ ಗುರುವಾರ ಇಲ್ಲಿ ಸೇನಾ ವಾಹನವೊಂದರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐದು ಮಂದಿ ಯೋಧರು ಮೃತಪಟ್ಟಿರುವುದು ಇದಕ್ಕೆ ಕಾರಣ.
ಮೃತ ಯೋಧರು ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದವರಾಗಿದ್ದರು ಹಾಗೂ ಉಗ್ರ-ನಿಗ್ರಹ ಕಾರ್ಯಾಚರಣೆಗೆ ಇದೇ ಗ್ರಾಮದಲ್ಲಿ ನಿಯೋಜಿಸಲ್ಪಟ್ಟವರಾಗಿದ್ದರು.
ಬಾಲಾಕೋಟ್‌ನ ಬಸೂನಿಯಲ್ಲಿನ ರಾಷ್ಟ್ರೀಯ ರೈಫಲ್ಸ್ ಮುಖ್ಯ ಕಾರ್ಯಾಲಯದಿಂದ ಸಾಗಿಸಲಾಗುತ್ತಿದ್ದ ವಸ್ತುಗಳು ಈ ಸೇನಾ ವಾಹನದಲ್ಲಿದ್ದರೆ, ಜೊತೆಗೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆಯಲಿದ್ದ ಇಫ್ತಾರ್ ಕೂಟಕ್ಕಾಗಿ ಹಣ್ಣುಗಳೂ ಈ ವಾಹನದಲ್ಲಿದ್ದವು.
ಗುರುವಾರ ಸಂಜೆಯ ಇಫ್ತಾರ್ ಕೂಟಕ್ಕೆ ಹಲವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸೇನಾ ಟ್ರಕ್ ಸಂಗಿಯೋಟೆ ಗ್ರಾಮ ತಲುಪಲು ಇನ್ನೇನು 8 ಕಿಮೀ ಇದೆ ಎನ್ನುವಾಗ ಈ ದಾಳಿ ನಡೆದಿತ್ತು.
ಈ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವಾರ್ಥವಾಗಿ ಸುಮಾರು 4,000 ಜನಸಂಖ್ಯೆಯಿರುವ ಈ ಗ್ರಾಮದ ಜನರು ಈದ್ ಆಚರಿಸದೇ ಇರಲು ನಿರ್ಧರಿಸಿದ್ದಾರೆ. ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ. ಇದೇ ಗ್ರಾಮದಲ್ಲಿ ನಿಯೋಜನೆಗೊಂಡಿದ್ದ ಯೋಧರು ಮೃತರಾಗಿರುವುದು ಗ್ರಾಮಸ್ಥರಿಗೆ ಇನ್ನಷ್ಟು ನೋವು ತಂದಿದೆ.
ಇಂದು ಈದ್ ಆಚರಿಸುವುದಿಲ್ಲ ಕೇವಲ ನಮಾಜ್ ಮಾತ್ರ ಸಲ್ಲಿಸಲಾಗುವುದು ಎಂದು ಸಂಗಿಯೋಟೆ ಪಂಚಾಯತಿನ ಸರಪಂಚ ಮುಖ್ತಿಯಾಝ್ ಖಾನ್ ಹೇಳುತ್ತಾರೆ.