×
Ad

ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತಿರುವೆ: ಬಂಗಲೆ ತೊರೆದ ನಂತರ ರಾಹುಲ್ ಗಾಂಧಿ ಹೇಳಿಕೆ

Update: 2023-04-22 18:49 IST

ಹೊಸದಿಲ್ಲಿ: ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿರುವ ತನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡಿದ ನಂತರ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಸತ್ಯವನ್ನು ಮಾತನಾಡಿದ್ದಕ್ಕಾಗಿ ಬೆಲೆ ತೆತ್ತಿರುವೆ. ಆದರೆ  ನಾನು ಯಾವುದೇ ಬೆಲೆ ತೆರಲು ಸಿದ್ಧ'' ಎಂದು ಶನಿವಾರ ಹೇಳಿದ್ದಾರೆ.

2005 ರಿಂದ 12 ತುಘಲಕ್ ಲೇನ್‌ನಲ್ಲಿರುವ ಸರಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದ 52 ವರ್ಷದ ರಾಹುಲ್  ಗಾಂಧಿ. 2019 ರ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಉಪ ನಾಮದ ಕುರಿತ ಹೇಳಿಕೆ ನೀಡಿದ್ದಕ್ಕೆ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿ  ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಕಳೆದ ತಿಂಗಳು ಸಂಸತ್ತಿನ ಕೆಳಮನೆಯಿಂದ ಅನರ್ಹಗೊಳಿಸಲಾಯಿತು.

ಗುಜರಾತ್  ನ್ಯಾಯಾಲಯದಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಹಿನ್ನಡೆ ಕಂಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ಮೇಲೆ ಮಾಡಿರುವ ದಾಳಿಗಾಗಿ ಆಡಳಿತಾರೂಢ ಬಿಜೆಪಿಯಿಂದ ಟಾರ್ಗೆಟ್ ಆಗುತ್ತಿದ್ದೇನೆ ಎಂದಿದ್ದಾರೆ.

 ವಯನಾಡಿನ ಮಾಜಿ ಸಂಸದರು ತಮ್ಮ ಲೋಕಸಭಾ ಸದಸ್ಯತ್ವವನ್ನು ಉಳಿಸಿಕೊಳ್ಳಲು ಸೂರತ್ ನ್ಯಾಯಾಲಯದ ಆದೇಶದ ವಿರುದ್ಧ ಈಗ ಗುಜರಾತ್ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.

"ಹಿಂದೂಸ್ತಾನದ ಜನರು ನನಗೆ 19 ವರ್ಷಗಳ ಕಾಲ ಈ ಮನೆಯನ್ನು ನೀಡಿದ್ದಾರೆ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಸತ್ಯವನ್ನು ಮಾತನಾಡಿದ್ದಕ್ಕಾಗಿ ತೆತ್ತ ಬೆಲೆಯಾಗಿದೆ. ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆಯನ್ನು ತೆರಲು ಸಿದ್ಧ..." ಎಂದು ರಾಹುಲ್  ಗಾಂಧಿ ಅವರು ಕಾರಿನಲ್ಲಿ ಹೊರಡುವ ಮೊದಲು  ತಮ್ಮ ಬಂಗಲೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

Similar News