×
Ad

ಸತ್ಯಪಾಲ್ ಮಲಿಕ್‌ಗೆ ಸಿಬಿಐ ಸಮನ್ಸ್: ನಮ್ಮ ವಿರುದ್ಧ ಮಾತನಾಡಿದ್ದಕ್ಕಲ್ಲ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ

Update: 2023-04-23 11:08 IST

ಬೆಂಗಳೂರು: ವಿಮಾ ಹಗರಣದ ಭಾಗವಾಗಿ ಮೂರನೆಯ ಬಾರಿ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ (Satya Pal Malik) ಅವರಿಗೆ ಸಿಬಿಐ ಸಮನ್ಸ್ ಜಾರಿಗೊಳಿಸಿದೆಯೇ ಹೊರತು ನಮ್ಮ ಬಿಜೆಪಿ (BJP) ನೇತೃತ್ವದ ಸರ್ಕಾರದ ವಿರುದ್ಧ ಅವರು ಆರೋಪ ಮಾಡಿದ್ದಾರೆಂದು ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

ಇಂಡಿಯಾ ಟುಡೇ ಆಯೋಜಿಸಿದ್ದ 'ಕರ್ನಾಟಕ ರೌಂಡ್ ಟೇಬಲ್' ಕಾರ್ಯಕ್ರಮದ ಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಿಂದ ಬಚ್ಚಿಡುವಂಥ ಏನನ್ನೂ ಬಿಜೆಪಿ ಸರ್ಕಾರ ಮಾಡಿಲ್ಲ. ಒಂದು ವೇಳೆ ವೈಯಕ್ತಿಕ, ರಾಜಕೀಯ ಹಿತಾಸಕ್ತಿಯಿಂದ ಅಂತಹ ಮಾತುಗಳನ್ನಾಡಿದ್ದರೆ ಅವನ್ನು ಅದೇ ರೀತಿ ಭಾವಿಸಬೇಕು ಎಂದು ಹೇಳಿದ್ದಾರೆ.

"ನನಗಿರುವ ಮಾಹಿತಿಯ ಪ್ರಕಾರ, ಅವರನ್ನು ಎರಡು ಅಥವಾ ಮೂರನೆಯ ಬಾರಿಗೆ ವಿಚಾರಣೆಗೆ ಕರೆಯಲಾಗಿದೆ. ಈ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಕೆಲವು ಹೊಸ ಮಾಹಿತಿ ಅಥವಾ ಸಾಕ್ಷ್ಯ ದೊರೆತಿರುವುದರಿಂದ ಅವರನ್ನು ಮೂರನೆಯ ಬಾರಿಗೆ ವಿಚಾರಣೆಗೆ ಕರೆದಿರಬಹುದು. ನಮ್ಮ ವಿರುದ್ಧ ಮಾತನಾಡಿದ್ದಕ್ಕೆ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂಬ ಮಾತಿನಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧದ ಸತ್ಯಪಾಲ್ ಮಲಿಕ್ ಅವರ ಆರೋಪಗಳನ್ನು ಪ್ರಸ್ತಾಪಿಸಿದ ಅವರು, "ನಮ್ಮನ್ನು ತೊರೆದ ನಂತರ ಇಂತಹ ವಿಚಾರಗಳೆಲ್ಲ ಅವರ ತಲೆಗೆ ಹೇಗೆ ಬಂದವು ಎಂಬುದನ್ನು ಪ್ರಶ್ನಿಸಬೇಕಿದೆ" ಎಂದು ಹೇಳಿದ್ದಾರೆ.

"ನೀವು ಅಧಿಕಾರದಲ್ಲಿದ್ದಾಗ ಯಾಕೆ ನಿಮ್ಮ ಆತ್ಮಸಾಕ್ಷಿ ಎಚ್ಚರಗೊಳ್ಳಲಿಲ್ಲ? ಈ ಮಾತಿನ ವಿಶ್ವಾಸಾರ್ಹತೆಯನ್ನು ಜನತೆ ಹಾಗೂ ಪತ್ರಕರ್ತರು ಗಮನಿಸುತ್ತಾರೆ. ಇವೆಲ್ಲವೂ ಸತ್ಯವೇ ಆಗಿದ್ದರೆ ನೀವು ರಾಜ್ಯಪಾಲರಾಗಿದ್ದಾಗ ಏಕೆ ಮೌನವಾಗಿದ್ದಿರಿ? ಇವೆಲ್ಲ ಸಾರ್ವಜನಿಕ ಚರ್ಚೆಯ ಸಂಗತಿಗಳಲ್ಲ. ಜನರಿಂದ ಬಚ್ಚಿಡುವಂಥ ಏನನ್ನೂ ಬಿಜೆಪಿ ನೇತೃತ್ವದ ಸರ್ಕಾರ ಮಾಡಿಲ್ಲ ಎಂದು ದೇಶದ ಜನತೆಗೆ ಹೇಳಲು ನಾನು ಬಯಸುತ್ತೇನೆ. ಒಂದು ವೇಳೆ ವೈಯಕ್ತಿಕ, ರಾಜಕೀಯ ಹಿತಾಸಕ್ತಿಗಾಗಿ ಇಂತಹ ಹೇಳಿಕೆಗಳನ್ನು ನೀಡಿದ್ದರೆ ಅದನ್ನು ದೇಶದ ಜನತೆ ಹಾಗೂ ಮಾಧ್ಯಮಗಳು ಮೌಲ್ಯಮಾಪನ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಮಾ ಹಗರಣದ ಕುರಿತು ಸ್ಪಷ್ಟನೆ ನೀಡುವಂತೆ ಸಿಬಿಐ ತನ್ನನ್ನು ವಿಚಾರಣೆಗೆ ಕರೆದಿದೆ ಎಂದು ಶುಕ್ರವಾರ ಸತ್ಯಪಾಲ್ ಮಲಿಕ್ ಹೇಳಿದ್ದರು.

Similar News