ಕಿರುಕುಳ ಪ್ರಕರಣ: ಯುವ ಕಾಂಗ್ರೆಸ್‌ನ ಬಿ.ವಿ. ಶ್ರೀನಿವಾಸ್ ರನ್ನು ಬಂಧಿಸಲು ಕರ್ನಾಟಕಕ್ಕೆ ಆಗಮಿಸಿದ ಅಸ್ಸಾಂ ಪೊಲೀಸರು
Update: 2023-04-23 11:51 IST
ಹೊಸದಿಲ್ಲಿ: ಅಮಾನತುಗೊಂಡಿರುವ ಅಸ್ಸಾಂ ಘಟಕದ ಯುವ ಕಾಂಗ್ರೆಸ್ ಮುಖ್ಯಸ್ಥೆ ಅಂಕಿತಾ ದತ್ತಾ ಅವರು ನೀಡಿದ ಕಿರುಕುಳದ ದೂರಿನ ಆಧಾರದ ಮೇಲೆ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರನ್ನು ಬಂಧಿಸಲು ಅಸ್ಸಾಂ ಪೊಲೀಸರ ತಂಡ ಶನಿವಾರ ಕರ್ನಾಟಕಕ್ಕೆ ತೆರಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀನಿವಾಸ್ ವಿರುದ್ಧ ದಿಸ್ಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 509, 294, 341, 352, 354, 354 ಎ, ಹಾಗೂ 506 ರ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೂಲಗಳ ಪ್ರಕಾರ ಶ್ರೀನಿವಾಸ್ ರನ್ನು ಬಂಧಿಸಲು ಅಸ್ಸಾಂ ಪೊಲೀಸರ ನಾಲ್ವರ ತಂಡವನ್ನು ಕರ್ನಾಟಕಕ್ಕೆ ಕಳುಹಿಸಲಾಗಿದೆ.
ಈ ಬೆಳವಣಿಗೆಯನ್ನು ಅಸ್ಸಾಂ ಡಿಜಿಪಿ ಜಿಪಿ ಸಿಂಗ್ ಖಚಿತಪಡಿಸಿದ್ದಾರೆ. ಆದರೆ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.