ಪಶ್ಚಿಮಬಂಗಾಳದಲ್ಲಿ 'ಮಕ್ಕಳ ಶವದೊಂದಿಗೆ ರಾಜಕೀಯ': ಬಂಗಾಳದ ಮಕ್ಕಳ ಹಕ್ಕುಗಳ ಸಂಸ್ಥೆ ಖಂಡನೆ
ಕೋಲ್ಕತ್ತಾ: ಹದಿನೇಳರ ಹರೆಯದ ಬಾಲಕಿಯ ಸಾವಿನ ಬಗ್ಗೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಪಶ್ಚಿಮ ಬಂಗಾಳ ಪೊಲೀಸರು ಇಂದು ಬೆಳಿಗ್ಗೆ ಜನರಲ್ಲಿ ಮನವಿ ಮಾಡಿದರು, ಮರಣೋತ್ತರ ಪರೀಕ್ಷೆಯ ವರದಿಯು ಸಾವಿಗೆ ವಿಷ ಸೇವನೆಯೇ ಕಾರಣ ಎಂದು ತೋರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಹೊರಬಂದ ಕೂಡಲೇ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮಕ್ಕಳ ಹಕ್ಕುಗಳ ಸಂಸ್ಥೆಯು ಕೇಂದ್ರ ಸರಕಾರಿ ಸಂಸ್ಥೆಯು "ಮಕ್ಕಳ ಮೃತದೇಹಗಳೊಂದಿಗೆ" ರಾಜಕೀಯ ಮಾಡುತ್ತಿದೆ ಹಾಗೂ ರಾಜ್ಯವನ್ನು ದೂಷಿಸಲು ಕಾನೂನುಗಳನ್ನು "ನಿಸ್ಸಂಶಯವಾಗಿ" ಉಲ್ಲಂಘಿಸುತ್ತಿದೆ ಎಂದು ಆರೋಪಿಸಿತು.
ಮಕ್ಕಳ ಹಕ್ಕುಗಳ ಪಾಲಕರೇ ಪಶ್ಚಿಮ ಬಂಗಾಳದಲ್ಲಿ ಮಕ್ಕಳ ಶವದೊಂದಿಗೆ ರಾಜಕೀಯ ಮಾಡುತ್ತಿದ್ದಾರೆ! ನಾಚಿಕೆಗೇಡಿನ NCPCR!" ಎಂದು ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (WBCPCR) ಟ್ವೀಟ್ ಮಾಡಿದೆ.
17 ವರ್ಷದ ಬಾಲಕಿಯ ಮೃತದೇಹದ ಮೇಲೆ ಲೈಂಗಿಕ ದೌರ್ಜನ್ಯವನ್ನು ಸೂಚಿಸುವ ಯಾವುದೇ ಪ್ರಮುಖ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಾಲಕಿಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದರಿಂದ ಸತತ ಎರಡು ದಿನಗಳಲ್ಲಿ ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಘಟನೆ ಖಂಡಿಸಿರುವ ಬಿಜೆಪಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬೇಡಿಕೆ ಇಟ್ಟಿದೆ.
ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಮರಣೋತ್ತರ ಪರೀಕ್ಷೆ ನಡೆಸಲು ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ ಹಾಗೂ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ