ಅಮೃತಪಾಲ್ ಶರಣಾಗಿದ್ದಾನೆ ಎಂಬ ವರದಿ ನಿರಾಕರಿಸಿದ ಪಂಜಾಬ್ ಪೊಲೀಸರು

Update: 2023-04-23 08:08 GMT

ಚಂಡಿಗಢ: ಮೊಗಾ ಜಿಲ್ಲೆಯ ರೋಡ್ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಖಾಲಿಸ್ತಾನದ ಪ್ರತಿಪಾದಕ, ವಿವಾದಾತ್ಮಕ ಪ್ರವಚನಕಾರ ಅಮೃತಪಾಲ್ ಸಿಂಗ್ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾದ ನಂತರ  ಪಂಜಾಬ್ ಪೊಲೀಸರು ಮಾಧ್ಯಮಗೋಷ್ಠಿಯಲ್ಲಿ ಈ ವರದಿಯನ್ನು ನಿರಾಕರಿಸಿದ್ದಾರೆ.

ಮಾರ್ಚ್ 18 ರಂದು ಅಮೃತಪಾಲ್ ಬಂಧನದಿಂದ  ತಪ್ಪಿಸಿಕೊಂಡಾಗಿನಿಂದ ಪೊಲೀಸರು ಆತನ ಮೇಲೆ ತೀವ್ರ ಒತ್ತಡ ಹಾಕಿದ್ದಾರೆ . ಪಂಜಾಬ್ ಪೊಲೀಸರ ಎಲ್ಲಾ ವಿಭಾಗಗಳು ಸಂಘಟಿತ ಕಾರ್ಯಾಚರಣೆಯ ಅಡಿಯಲ್ಲಿ ಆತನನ್ನು ನಿರಂತರವಾಗಿ ಪತ್ತೆಹಚ್ಚಲು ಪ್ರಯತ್ನಿಸಿವೆ. ಇದರ ಪರಿಣಾಮವಾಗಿ, ರೋಡ್ ಗ್ರಾಮದಲ್ಲಿ ಅಮೃತಪಾಲ್ ಇರುವಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ  ಸಿಕ್ಕಿತು ಎಂದು ಪೊಲೀಸ್ ಮಹಾನಿರೀಕ್ಷಕ ಸುಖಚೈನ್ ಸಿಂಗ್ ಗಿಲ್ ಮಾಧ್ಯಮಗಳಿಗೆ ತಿಳಿಸಿದರು.

 ಮಾಹಿತಿಯ ಆಧಾರದ ಮೇಲೆ ಅಮೃತಸರ ಪೊಲೀಸ್ ಹಾಗೂ  ಪಂಜಾಬ್ ಗುಪ್ತಚರ ವಿಭಾಗದ ಜಂಟಿ ತಂಡವು ಇಡೀ ಗ್ರಾಮವನ್ನು ಸುತ್ತುವರೆದಿದೆ. ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಅಮೃತಪಾಲ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ಸುತ್ತುವರಿಯಲಾಗಿತ್ತು ಎಂದು ಗಿಲ್ ಹೇಳಿದರು.

ಆತ ಗುರುದ್ವಾರ ಸಾಹಿಬ್‌ನ ಒಳಗಿದ್ದ ಕಾರಣ, ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಲು ಪೊಲೀಸರು ಒಳಗೆ ಪ್ರವೇಶಿಸಲಿಲ್ಲ. ಆತನಿಗೆ ಈಗ ಹೊರ ಹೋಗಲು ಎಲ್ಲಿಯೂ ಸಾಧ್ಯವಿಲ್ಲ ಎಂದು  ಮನವರಿಕೆಯಾಗಿದ್ದರಿಂದ, ಆತ ಗುರುದ್ವಾರದಿಂದ ಹೊರಬಂದ ತಕ್ಷಣ ಆತನನ್ನು ಬಂಧಿಸಲಾಯಿತು ” ಎಂದು ಗಿಲ್ ಹೇಳಿದರು.

Similar News