×
Ad

ಬಂಧನದ ನಂತರ ಅಮೃತ್‌ಪಾಲ್‌ನನ್ನು ಅಸ್ಸಾಮಿನ ದಿಬ್ರುಗಢ್ ಜೈಲಿಗೆ ಕರೆದೊಯ್ದದ್ದೇಕೆ?: ಇಲ್ಲಿದೆ ಮಾಹಿತಿ

Update: 2023-04-23 14:15 IST

ಚಂಡೀಗಢ: ರವಿವಾರ ಬೆಳಗ್ಗೆ ಮೋಗಾದಲ್ಲಿನ ರೋಡೆ ಗ್ರಾಮದಲ್ಲಿ ಬಂಧನಕ್ಕೀಡಾದ 'ವಾರಿಸ್ ಪಂಜಾಬ್ ದೆ' ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್‌ನನ್ನು ಅಸ್ಸಾಮಿನ ದಿಬ್ರುಗಢ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಮೊದಲು ಬಟಿಂಡಾದಲ್ಲಿನ ವಾಯು ಸೇನೆ ನಿಲ್ದಾಣಕ್ಕೆ ಕರೆ ತರಲಾಯಿತು ಎಂದು hindustantimes.com ವರದಿ ಮಾಡಿದೆ.

ಅಮೃತ್‌ಪಾಲ್ ಸಿಂಗ್ ಸಹಚರರಾದ ದಲ್ಜಿತ್‌ಸಿಂಗ್ ಕಲ್ಸಿ, ಪಾಪಲ್‌ಪ್ರೀತ್ ಸಿಂಗ್, ಕುಲ್ವಂತ್ ಸಿಂಗ್ ಧಾಲಿವಾಲ್, ವರೀಂದ್ರ ಸಿಂಗ್ ಜೋಹಲ್, ಗುರ್ಮೀತ್ ಸಿಂಗ್ ಬುಕ್ಕನ್ವಾಲಾ, ಹರ್ಜಿತ್ ಸಿಂಗ್, ಭಗವಂತ್ ಸಿಂಗ್, ಬಸಂತ್ ಸಿಂಗ್ ಹಾಗೂ ಗುರಿಂದರ್‌ಪಾಲ್ ಸಿಂಗ್ ಔಜ್ಲಾ ಅವರನ್ನೂ ಅಸ್ಸಾಮಿನ ದಿಬ್ರುಗಢ್ ಕಾರಾಗೃಹದಲ್ಲಿರಿಸಲಾಗಿದ್ದು, ಅವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಮೊಕದ್ದಮೆ ಹೂಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, "ಆತ ಎನ್‌ಎಸ್‌ಎ ಆರೋಪಿಯಾಗಿದ್ದು, ಆತನನ್ನು ದಿಬ್ರುಗಢ್ ಜೈಲಿಗೆ ಕರೆದೊಯ್ಯಲಾಗುವುದು" ಎಂದು ತಿಳಿಸಿದ್ದಾರೆ.

ಅಮೃತ್‌ಪಾಲ್ ಸಿಂಗ್‌ನನ್ನು ದಿಬ್ರುಗಢ್ ಜೈಲಿಗೆ ಏಕೆ ಸ್ಥಳಾಂತರಿಸಲಾಗಿದೆ ಎಂಬ ಸಂಗತಿ ಇನ್ನೂ ತಿಳಿದು ಬಂದಿಲ್ಲವಾದರೂ, ಕೆಲವು ಮೂಲಗಳ ಪ್ರಕಾರ, ದಿಬ್ರುಗಢ್ ಜೈಲು ಭಾರಿ ಭದ್ರತೆ ಹೊಂದಿರುವ ಜೈಲಾಗಿದ್ದು, ಅಸ್ಸಾಂನಲ್ಲಿ ಉಲ್ಫಾ ಭಯೋತ್ಪಾದನೆ ಉತ್ತುಂಗದಲ್ಲಿದ್ದಾಗ ಪ್ರಮುಖ ಭಯೋತ್ಪಾದಕರನ್ನು ಬಂಧನದಲ್ಲಿಡಲು ಆ ಜೈಲನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ದಿಬ್ರುಗಢ್ ಕೇಂದ್ರ ಕಾರಾಗೃಹವನ್ನು ಅಸ್ಸಾಂನಲ್ಲಿನ ಅತ್ಯಂತ ಸುರಕ್ಷಿತ ಕಾರಾಗೃಹ ಎಂದು ಪರಿಗಣಿಸಲಾಗಿದ್ದು, ಈಶಾನ್ಯ ಭಾರತದಲ್ಲಿರುವ ಅತ್ಯಂತ ಪುರಾತನ ಕಾರಾಗೃಹ ಕೂಡಾ ಇದೇ ಆಗಿದೆ.

ಈ ಕಾರಾಗೃಹದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳಿರುವುದರಿಂದ ಇಲ್ಲಿಂದ ಯಾವುದೇ ಕೈದಿ ತಪ್ಪಿಸಿಕೊಂಡು ಪರಾರಿಯಾಗುವುದು ಅಸಾಧ್ಯ ಎಂದೇ ಹೇಳಲಾಗಿದೆ.

ಪಂಜಾಬ್ ಮತ್ತು ದಿಲ್ಲಿಯಲ್ಲಿ ಪ್ರತ್ಯೇಕತಾವಾದ ಗುಂಪಿನೊಂದಿಗೆ ನಿಕಟ ಸಂಬಂಧ ಹೊಂದಿರುವ ಭೂಗತ ಪಾತಕಿಗಳಿರುವುದರಿಂದ ಅಮೃತ್‌ಪಾಲ್ ಹಾಗೂ ಆತನ ಸಹಚರರನ್ನು ಅಸ್ಸಾಂಗೆ ಸ್ಥಳಾಂತರಿಸಲಾಗಿದೆ ಎಂಬ ಕಾರಣವೂ ಕೇಳಿ ಬರುತ್ತಿದೆ.

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಪಂಜಾಬ್ ಸರ್ಕಾರವು ಮೊದಲಿಗೆ ಅಮೃತ್‌ಪಾಲ್‌ನನ್ನು ದಿಲ್ಲಿಯ ತಿಹಾರ್ ಜೈಲಿಗೆ ಕಳಿಸಲು ಯೋಜಿಸಿತ್ತು. ಆದರೆ, ತಿಹಾರ್ ಜೈಲಿನಲ್ಲಿ ಪಂಜಾಬಿನ ಹಲವಾರು ಭೂಗತ ಪಾತಕಿಗಳು ಹಾಗೂ ಪ್ರತ್ಯೇಕತಾವಾದಿಗಳೂ ಇರುವುದರಿಂದ ಸರ್ಕಾರವು ಆತನನ್ನು ಅಸ್ಸಾಂಗೆ ಸ್ಥಳಾಂತರಿಸಲು ನಿರ್ಧರಿಸಿತು ಎಂದು ಹೇಳಲಾಗಿದೆ.

Similar News