ಪ್ರಧಾನಿ ಮೋದಿ ಕೇರಳ ಭೇಟಿ ಹಿನ್ನೆಲೆ: ಆತ್ಮಹತ್ಯಾ ದಾಳಿಯ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯ ಬಂಧನ
ಕೊಚ್ಚಿ: ಸೋಮವಾರ ನಗರಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆತ್ಮಹತ್ಯಾ ದಾಳಿ ನಡೆಸುವುದಾಗಿ ಎಚ್ಚರಿಕೆ ಪತ್ರ ಬರೆದಿದ್ದ 53 ವರ್ಷದ ಕೊಚ್ಚಿ ಮೂಲದ ವ್ಯಕ್ತಿಯನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕ್ಸೇವಿಯರ್ ಅಂಜನಿಕಲ್ ಎಂದು ಗುರುತಿಸಲಾಗಿದ್ದು, ಈತ ಕಾಲೂರು-ಕತ್ರಿಕಡವು ರಸ್ತೆಯ ಐದನೇ ಅಡ್ಡ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೊಚ್ಚಿಯಲ್ಲಿ ಅಡುಗೆ ಸಂಸ್ಥೆ ನಡೆಸುತ್ತಿದ್ದಾನೆ.
ಆರೋಪಿಯು ಎನ್‌ಜೆ ಜಾನಿ ಹೆಸರಿನಲ್ಲಿ ಬರೆದ ಪತ್ರವನ್ನು ಕಳೆದ ವಾರ ಬಿಜೆಪಿ ಕಚೇರಿಗೆ ತಲುಪಿಸಿದ್ದ. ಜಾನಿ ಹಾಗೂ ಕ್ಸೇವಿಯರ್ ಒಂದೇ ಪ್ಯಾರಿಷ್‌ನ ಸದಸ್ಯರಾಗಿದ್ದು, ಪ್ಯಾರಿಷ್ ಕೌನ್ಸಿಲ್ ವಿವಾದದ ನಂತರ ಕ್ಸೇವಿಯರ್ ಮೂರು ವರ್ಷಗಳ ಹಿಂದೆ ಜಾನಿ ವಿರುದ್ಧ ಅನಾಮಧೇಯ ಪತ್ರ ಬರೆದಿದ್ದ.
ಕ್ಸೇವಿಯರ್ ಬಂಧನವನ್ನು ಕೊಚ್ಚಿ ನಗರ ಪೊಲೀಸ್ ಆಯುಕ್ತ ಕೆ. ಸೇತು ರಾಮನ್ ಖಚಿತಪಡಿಸಿದ್ದಾರೆ.
‘‘ತಜ್ಞರ ನೆರವಿನೊಂದಿಗೆ ಆರೋಪಿಯ ಕೈಬರಹವನ್ನು ಪರಿಶೀಲಿಸಿದ್ದೇವೆ. ಕೊಚ್ಚಿಯಲ್ಲಿ ಪ್ರಧಾನಿ ಮೇಲೆ ಆತ್ಮಹತ್ಯಾ ದಾಳಿಯ ಬಗ್ಗೆ ಬಿಜೆಪಿ ಕಚೇರಿಗೆ ಪತ್ರ ಬರೆದಿರುವುದು ಇದೇ ವ್ಯಕ್ತಿ ಎನ್ನುವುದು ದೃಢಪಟ್ಟಿದೆ. ಗಾಬರಿ ಪಡುವ ಅಗತ್ಯವಿಲ್ಲ. ಪತ್ರವು ಸುಳ್ಳು ಎಂದು ದೃಢಪಡಿಸಲಾಗಿದೆ ”ಎಂದು ಅವರು ಹೇಳಿದರು.