×
Ad

ಅಹಮದಾಬಾದ್‌: ಒಳ ಚರಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಪೌರ ಕಾರ್ಮಿಕರು ಮೃತ್ಯು

Update: 2023-04-23 14:57 IST

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಒಳ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗಲೇ  ಇಬ್ಬರು ಪೌರ  ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಶನಿವಾರ  ಸಂಜೆ ಧೋಲ್ಕಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಗೋಪಾಲ್ ಪಾಧರ್ (24 ವರ್ಷ) ಮತ್ತು ಬಿಜಲ್ ಪಾಧರ್ (32 ವರ್ಷ) ಎಂದು ಗುರುತಿಸಲಾದ ಇಬ್ಬರು ಕಾರ್ಮಿಕರು ಸ್ವಚ್ಛಗೊಳಿಸಲು ಚರಂಡಿಗೆ ಪ್ರವೇಶಿಸಿದ ನಂತರ ಪ್ರಜ್ಞಾಹೀನರಾದರು.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಧೋಲ್ಕಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಇಬ್ಬರು ಗಟಾರ ಲೈನ್‌ಗೆ ಪ್ರವೇಶಿಸಿದಾಗ ಈ ಘಟನೆ ಸಂಭವಿಸಿದೆ. ಅವರು ಉಸಿರುಕಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ಗುತ್ತಿಗೆದಾರರಾದ ಆಶಿಕ್ ಠಾಕೂರ್ ಹಾಗೂ  ಜಗದೀಶ್ ಠಾಕೂರ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಧೋಲ್ಕಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ 11 ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ಸರಕಾರ ಇತ್ತೀಚೆಗೆ ವಿಧಾನಸಭೆಗೆ ತಿಳಿಸಿದೆ.

Similar News