×
Ad

ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಂಡಿದೆ: ಡಿಕೆ ಶಿವಕುಮಾರ್

Update: 2023-04-23 20:24 IST

ಬೈಂದೂರು, ಎ.23: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಪರಿಶುದ್ಧ ಆಡಳಿತ ಕೊಟ್ಟಿಲ್ಲ. ಜನರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜನರ ಆದಾಯ ದ್ವಿಗುಣ ಆಗಿಲ್ಲ. ಇದರಿಂದ ಬಿಜೆಪಿ ರಾಜ್ಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಆದ್ದರಿಂದ ಕಾಂಗ್ರೆಸ್ ಈ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದ ಹಾಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೈಂದೂರಿನ ಯಡ್ತರೆಯ ಜೆಎನ್‌ಆರ್ ಕಲಾ ಮಂದಿರದಲ್ಲಿ ರವಿವಾರ ನಡೆದ ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಪರ ಚುನಾವಣಾ ಪ್ರಚಾರ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬೈಂದೂರು ಜನರ ಉತ್ಸಾಹ ನೋಡಿದರೆ ಗೋಪಾಲ ಪೂಜಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಸರಳ, ಸಜ್ಜನಿಕೆಯ, ಒಂದೂ ಚೂರು ಕಪ್ಪುಚುಕ್ಕೆಯಿಲ್ಲದೆ 4 ಬಾರಿ ಶಾಸಕರಾಗಿದ್ದು, ಸೋತರೂ ಕ್ಷೇತ್ರದ ಜನರ ಹಿತಕ್ಕಾಗಿ ಸದಾ ಶ್ರಮಿಸುತ್ತಿರುವ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಪ್ರತಿಜ್ಞೆ ಮಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಇಲ್ಲಿನ ಮೀನುಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಮಾತನಾಡಿ, 6 ಬಾರಿ ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಕಣಕ್ಕಿಳಿದು, 2 ರಲ್ಲಿ ಸೋತು, ನಾಲ್ಕರಲ್ಲಿ ಗೆದ್ದಿದ್ದೇನೆ. ಕಳೆದ ಬಾರಿ ಬಿಜೆಪಿ ಅಪಪ್ರಚಾರದಿಂದ ಸೋಲು ಅನುಭವಿಸುವಂತಾಗಿದೆ. ಮರವಂತೆ ಬಂದರಿನ ಅಭಿವೃದ್ಧಿ 4 ಬಜೆಟ್ ಕಳೆದರೂ ಮಾಡಿಲ್ಲ. ಅದಕ್ಕೆ ನಮ್ಮ ಸರಕಾರವೇ ಬರಬೇಕಾಗಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಕಿಶನ್ ಕುಮಾರ್ ಹೆಗ್ಡೆ ಕೊಳ್ಕೆಬೈಲು, ಬೈಂದೂರು ಬ್ಲಾಕ್ ಅಧ್ಯಕ್ಷ ಮದನಕುಮಾರ್, ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಜಿಪಂ ಮಾಜಿ ಸದಸ್ಯರಾದ ಬಾಬು ಹೆಗ್ಡೆ ತೆಗ್ಗರ್ಸೆ, ಶಂಕರ್ ಪೂಜಾರಿ, ಮಾಜಿ ತಾಪಂ ಸದಸ್ಯರಾದ ಸದಾಶಿವ ಪಡುವರಿ, ದಸ್ತಗಿರಿ ಸಾಹೇಬ್, ಕುಂದಾಪುರ ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ, ಉದ್ಯಮಿ ಯು.ಬಿ.ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಪ್ರಕಾಶ್ಚಂದ್ರ ಶೆಟ್ಟಿ ಖಂಬದ ಕೋಣೆ, ವಿಜಯ್ ಶೆಟ್ಟಿ ಕಾಲ್ತೋಡು, ಡಾ.ಸುಬ್ರಮಣ್ಯ ಭಟ್, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಗೌರಿ ದೇವಾಡಿಗ, ಮಂಜುಳಾ ದೇವಾಡಿಗ ಮೊದ ಲಾದವರು ಉಪಸ್ಥಿತರಿದ್ದರು.

ಟೆಂಪಲ್ ರನ್ ಅಲ್ಲ, ಪಕ್ಷದ ಪ್ರಚಾರ ಮಾಡುತ್ತಿದ್ದೇನೆ: ಡಿ.ಕೆ.ಶಿವಕುಮಾರ್ 

ನಾನು ಟೆಂಪಲ್ ರನ್ ಮಾಡುತ್ತಿಲ್ಲ. ಪಕ್ಷದ ಪ್ರಚಾರ ಮಾಡುತ್ತಿದ್ದೇನೆ. ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ದೇವರ ಬಗ್ಗೆ ನನಗೆ ನಂಬಿಕೆ ಇದೆ. ನಾನು ಹೋದ ಕ್ಷೇತ್ರದ ಎಲ್ಲಾ ದೇವಸ್ಥಾನಗಳಿಗೂ ಭೇಟಿ ಕೊಡುತ್ತಿದ್ದೇನೆ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೈಂದೂರಿನಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಉಪ್ಪಿನಕಾಯಿ ಹಾಕಲು ಎಂದು ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಬಿಜೆಪಿ ಮಹಿಳೆಯರಿಗೆ 2-3 ಸಾವಿರ ಹಣ ಕೊಡುವ ಭರವಸೆ ಕೊಟ್ಟಿದ್ದಾರೆ. ಬಜೆಟ್‌ನಲ್ಲಿ 1000 ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಏಳರಿಂದ ಹತ್ತು ಗಂಟೆಗೆ ಕರೆಂಟ್ ಕೊಡುತ್ತೇವೆ ಎಂದಿದ್ದಾರೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದಾರೆ. ಇದೆಲ್ಲ ಯಾಕೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಬದ್ಧತೆ ಇದೆ. ಮೊದಲ ಕ್ಯಾಬಿನೆಟ್‌ನಲ್ಲಿ ಹೇಳಿದ್ದನ್ನು ಅನುಷ್ಠಾನಕ್ಕೆ ತರುತ್ತೇವೆ. ನಾವು ಅನುಷ್ಠಾನ ಮಾಡದಿದ್ದರೆ ಮುಂದೆ ನಾವು ಮತ ಕೇಳುವುದಿಲ್ಲ ಎಂದರು.

ಕನಕಪುರದಲ್ಲಿ ಆರ್.ಅಶೋಕ್ ಕೆಲ ನಿಮಿಷದ ಮತ ಪ್ರಚಾರದ ಕುರಿತ ಪ್ರಶ್ನೆಗೆ ಪ್ರಕ್ರಿಯಿಸಿದ ಡಿ.ಕೆ. ಶಿವಕುಮಾರ್, ಕನಕಪುರದ ಬಿಜೆಪಿ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಕನಕಪುರದಲ್ಲಿ ಎಷ್ಟು ಬೇಕಾದರೂ ಪ್ರಚಾರ ಮಾಡಲಿ. ಅವರಿಗೆ ದೊಡ್ಡ ಅವಕಾಶ ಇದೆ. ಯಾರ ಮನವನ್ನು ಬೇಕಾದರೂ ಒಲಿಸಲಿ. ಮತದಾರರ ಬಳಿ ಏನು ಬೇಕಾದರೂ ಕೇಳಿಕೊಳ್ಳಲಿ. ಅಶೋಕ್‌ಗೆ ಯಾವುದೇ ಅಡಚಣೆ ಮಾಡಲ್ಲ ನಾವು ಅಡ್ಡ ಬರಲ್ಲ. ಕಾಂಗ್ರೆಸ್ ಕಾರ್ಯ ಕರ್ತರು ಯಾರು ಮಾತನಾಡಬಾರದು ಮತ್ತು ಗೌರವದಿಂದ ನಡೆದುಕೊಳ್ಳಬೇಕು ಎಂದು ಕನಕಪುರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮೈಸೂರಿನಲ್ಲಿ ಸೋಮಣ್ಣ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ವಿಚಾರದ ಬಗ್ಗೆ ಪ್ರತ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತಯಾಚನೆ ಮಾಡುವ ಹಕ್ಕಿದೆ. ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಹೋಗಬಾರದು. ಯಾರು ಎಲ್ಲಿ ಬೇಕಾದರೂ ಪ್ರಚಾರ ಮಾಡ ಬಹುದು ಎಂದರು.

Similar News