ಸುಡಾನ್ ನಿಂದ ಭಾರತೀಯರು ಸೇರಿದಂತೆ 66 ವಿದೇಶಿಯರನ್ನು ತೆರವುಗೊಳಿದ ಸೌದಿ ಅರೇಬಿಯ
ಹೊಸದಿಲ್ಲಿ, ಎ.23: ಸೌದಿ ಅರೇಬಿಯದ ಅಧಿಕಾರಿಗಳು ಶನಿವಾರ ಭಾರತೀಯರು ಸೇರಿದಂತೆ 66 ವಿದೇಶಿಯರನ್ನು ಅಂತರ್ಯುದ್ಧ ಪೀಡಿತ ಸುಡಾನಿನಿಂದ ತೆರವುಗೊಳಿಸಿದ್ದಾರೆ ಎಂದು ಆ ದೇಶದ ವಿದೇಶಾಂಗ ಸಚಿವಾಲಯವು ಪ್ರಕಟಿಸಿದೆ. ತೆರವುಗೊಂಡಿರುವ ಭಾರತೀಯರ ನಿಖರವಾದ ಸಂಖ್ಯೆ ತಿಳಿದುಬಂದಿಲ್ಲ.
ಸೌದಿ ಅರೇಬಿಯದ 91 ಮತ್ತು ಇತರ ದೇಶಗಳ 66 ಪ್ರಜೆಗಳನ್ನು ಹೊತ್ತ ಹಡಗು ಶನಿವಾರ ಪೋರ್ಟ್ ಸುಡಾನ್ನಿಂದ ಜೆದ್ದಾಕ್ಕೆ ಪ್ರಯಾಣಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ತೆರವುಗೊಂಡವರಲ್ಲಿ ರಾಜತಾಂತ್ರಿಕರು ಮತ್ತು ಅಂತರರಾಷ್ಟ್ರೀಯ ಅಧಿಕಾರಿಗಳು ಸೇರಿದ್ದಾರೆ. ಎರಡು ಮಿಲಿಟರಿ ಬಣಗಳು ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಸೂಡಾನ್ನಿಂದ ಇದು ಮೊದಲ ನಾಗರಿಕರ ತೆರವು ಕಾರ್ಯಾಚರಣೆಯಾಗಿದೆ.
ಸುಡಾನ್ನಲ್ಲಿ ಅಂತರ್ಯುದ್ಧ ಆರಂಭಗೊಂಡ ಬಳಿಕ ರಾಜಧಾನಿ ಖಾರ್ಟೂಮ್ ಮತ್ತು ಇತರ ನಗರಗಳಲ್ಲಿ ಹಲವಾರು ಭಾರತೀಯರು ಸಿಕ್ಕಿಹಾಕಿಕೊಂಡಿದ್ದಾರೆ. ಜ.ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದ ಸೂಡಾನ್ ಸೇನೆಯು ಜ.ಮುಹಮ್ಮದ್ ಹಮ್ದಾನ್ ಡಾಗಲೋ ನೇತೃತ್ವದ ಅರೆಸೇನಾ ಪಡೆ ರ್ಯಾಪಿಡ್ ಸಪೋರ್ಟ್ ಫೋರ್ಸಸ್ ಜೊತೆ ಕಾದಾಡುತ್ತಿದೆ.
ಎ.16ರಂದು ಗುಂಡಿನ ಕಾಳಗದ ನಡುವೆ ಗುಂಡು ತಗುಲಿ ಅಲ್ಬರ್ಟ್ ಆಗಸ್ಟಿನ್ ಎಂಬ ಭಾರತೀಯ ಪ್ರಜೆ ಮೃತಪಟ್ಟಿದ್ದರು. ಮನೆ ಬಿಟ್ಟು ಹೊರಗೆ ತೆರಳದಂತೆ ಸೂಡಾನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಎ.20ರಂದು ಆ ದೇಶದಲ್ಲಿರುವ ಭಾರತೀಯರಿಗೆ ಸೂಚಿಸಿತ್ತು.
ಸೇನೆಯ ಇತರ ಶಾಖೆಗಳ ಬೆಂಬಲದೊಂದಿಗೆ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸೌದಿ ಅರೇಬಿಯಾ ಶನಿವಾರ ತಿಳಿಸಿದೆ. ಸುಡಾನ್ನಿಂದ ರಕ್ಷಿಸಲಾಗಿರುವವರಲ್ಲಿ ಭಾರತೀಯರಲ್ಲದೆ ಕುವೈತ್, ಖತರ್, ಯುಎಇ, ಈಜಿಪ್ಟ್, ಟ್ಯುನಿಷಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಪ್ಪೀನ್ಸ್, ಬುರ್ಕಿನಾ ಫಾಸೋ ಮತ್ತು ಕೆನಡಾಗಳ ಪ್ರಜೆಗಳೂ ಸೇರಿದ್ದಾರೆ.
ರಕ್ಷಿಸಲಾಗಿರುವ ವಿದೇಶಿ ಪ್ರಜೆಗಳನ್ನು ಅವರ ದೇಶಗಳಿಗೆ ರವಾನಿಸಲು ಎಲ್ಲ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸೌದಿ ಅರೇಬಿಯ ಹೇಳಿಕೆಯಲ್ಲಿ ತಿಳಿಸಿದೆ.