×
Ad

ಯುವ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಕಿರುಕುಳ ಪ್ರಕರಣ: ಕಾಂಗ್ರೆಸ್ ಮತ್ತು ಅಸ್ಸಾಂ ಸಿಎಂ ನಡುವೆ ವಾಕ್ಸಮರ

Update: 2023-04-23 21:13 IST

ಹೊಸದಿಲ್ಲಿ, ಎ.23: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿ.ವಿ. ಅವರ ವಿರುದ್ಧ ದಾಖಲಾಗಿರುವ ಕಿರುಕುಳ ಪ್ರಕರಣವು ಕಾಂಗ್ರೆಸ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನಡುವೆ ವಾಕ್ಸಮರವನ್ನು ಹುಟ್ಟುಹಾಕಿದೆ.

ಶ್ರೀನಿವಾಸ ವಿರುದ್ಧದ ಕಿರುಕುಳ ಆರೋಪಗಳ ತನಿಖೆಗಾಗಿ ಅಸ್ಸಾಂ ಪೊಲೀಸರ ತಂಡವು ಕರ್ನಾಟಕವನ್ನು ತಲುಪಿದ್ದು,ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರು,ಶರ್ಮಾ ಸುದ್ದಿಯಲ್ಲಿರುವ ತನ್ನ ತಂತ್ರಗಳಿಗಾಗಿ ಕುಖ್ಯಾತರಾಗಿದ್ದಾರೆ ಎಂದು ಆರೋಪಿಸಿದರು. ಶ್ರೀನಿವಾಸ ವಿರುದ್ಧದ ಆರೋಪಗಳನ್ನು ‘ಅಪಪ್ರಚಾರ ’ಎಂದು ತಳ್ಳಿಹಾಕಿದ ಅವರು,ಶರ್ಮಾ ಕೇಂದ್ರ ಗೃಹಸಚಿವ ಅಮಿತ್ ಶಾರನ್ನು ಮೀರಿಸಲು ಪ್ರಯತ್ನಿಸುತ್ತಿರುವುದರಿಂದ ಅವರ ಮಾತುಗಳಿಗೆ ಗಮನ ನೀಡದಂತೆ ಸೂಚಿಸಿದರು.

‘ಶಾರನ್ನು ಮೀರಿಸಲು ಪ್ರಯತ್ನಿಸುತ್ತಿರುವ ಅಸ್ಸಾಮಿನ ಪಕ್ಷಾಂತರಿ ಮುಖ್ಯಮಂತ್ರಿಗಳು ಸುದ್ದಿಯಲ್ಲಿರಲು ತನ್ನ ತಂತ್ರಗಳಿಗಾಗಿ ಕುಖ್ಯಾತರಾಗಿದ್ದಾರೆ. ನಾವು ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಕೆಲವೊಮ್ಮೆ ಪವನ್ ಖೇರಾರನ್ನು,ಕೆಲವೊಮ್ಮೆ ಶ್ರೀನಿವಾಸ ಬಿ.ವಿ.ಯವರನ್ನು ಬಂಧಿಸಲು ಅವರು ಬಯಸುತ್ತಾರೆ ’ ಎಂದು ಹೇಳಿದ ಸುರ್ಜೆವಾಲಾ,ಹಿಂದೊಮ್ಮೆ ಶಾರದಾ  ಮತ್ತು ಲೂಯಿಸ್ ಬರ್ಗರ್ ಹಗರಣಗಳಲ್ಲಿ ಶರ್ಮಾರನ್ನು ಬಂಧಿಸಲು ಮೋದಿ ಪ್ರಯತ್ನಿಸಿದ್ದರು ಮತ್ತು ಮುಖಭಂಗದಿಂದ ಪಾರಾಗಲು ಅವರು ಬಿಜೆಪಿಗೆ ಜಿಗಿದಿದ್ದರು. ಅವರನ್ನು ತಿರಸ್ಕರಿಸಿ ಮತ್ತು ಅವರಿಗೆ ಗಮನ ನೀಡಬೇಡಿ ಎಂದರು.

ಸುರ್ಜೆವಾಲಾರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶರ್ಮಾ,ಅಸ್ಸಾಂ ಪೊಲೀಸರು ಕಾನೂನಿಗನುಗುಣವಾಗಿ ಕ್ರಮ ಜರುಗಿಸುತ್ತಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದೊಳಗೆ ಮಹಿಳಾ ಕಾರ್ಯಕರ್ತರಿಗೆ ಸುರಕ್ಷಿತ ವಾತಾವರಣದ ಕೊರತೆಗಾಗಿ ತನ್ನನ್ನು ದೂಷಿಸುವುದು ನ್ಯಾಯವಲ್ಲ ಎಂದು ಹೇಳಿದ್ದಾರೆ.

‘ದಯವಿಟ್ಟು,ಕಾನೂನು ಪ್ರಕ್ರಿಯೆಗೆ ಸಹಕರಿಸುವಂತೆ ಆರೋಪಿಗೆ ಸೂಚಿಸಿ ’ಎಂದು ಶರ್ಮಾ ಟ್ವೀಟಿಸಿದ್ದಾರೆ. ಮೇ 2ರಂದು ಬೆಳಿಗ್ಗೆ 11 ಗಂಟೆಯ ಮೊದಲು ದಿಸ್ಪುರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಶ್ರೀನಿವಾಸ್ ಅವರಿಗೆ ಸೂಚಿಸಿರುವ ನೋಟಿಸಿನ ಪ್ರತಿಯನ್ನು ಅವರು ಟ್ವೀಟ್ನೊಂದಿಗೆ ಹಂಚಿಕೊಂಡಿದ್ದಾರೆ.

ಅಸ್ಸಾಂ ಯುವಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಅಂಗಕಿತಾ ದತ್ತಾ ಅವರು ಶನಿವಾರ ದಿಸ್ಪುರ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ತಾನು ಮಾಜಿ ಯುವಕಾಂಗ್ರೆಸ್ ಅಧ್ಯಕ್ಷ ಕೇಶವ ಕುಮಾರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿದ ಬಳಿಕ ಕಳೆದ ಆರು ತಿಂಗಳುಗಳಿಂದಲೂ ಶ್ರೀನಿವಾಸ ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ತನ್ನ ವಿರುದ್ಧ ತಾರತಮ್ಯವನ್ನು ತೋರಿಸುತ್ತಿದ್ದಾರೆ ಎಂದು ದತ್ತಾ ದೂರಿನಲ್ಲಿ ಆರೋಪಿಸಿದ್ದಾರೆ.

ಈ ನಡುವೆ ಕಾಂಗ್ರೆಸ್,ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ದತ್ತಾರನ್ನು ಆರು ವರ್ಷಗಳ ಅವಧಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ಕಾಂಗ್ರೆಸ್ ಅನ್ನು ಟೀಕಿಸಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ಇದು ಮಹಿಳಾ ಸಬಲೀಕರಣದ ಕಾಂಗ್ರೆಸ್ ಮಾದರಿಯಾಗಿದೆ ಎಂದು ಟ್ವೀಟಿಸಿದ್ದಾರೆ.

Similar News