ಉತ್ತರಾಖಂಡ: ತಪಾಸಣಾಧಿಕಾರಿಯ ತಲೆ ಕತ್ತರಿಸಿದ ಹೆಲಿಕಾಪ್ಟರ್ ಬ್ಲೇಡ್!
ಡೆಹ್ರಾಡೂನ್: ಉತ್ತರಾಖಂಡದ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ)ದ ಹಣಕಾಸು ನಿಯಂತ್ರಕ ಅಮಿತ್ ಸೈನಿ ಎಂಬುವವರು ಹೆಲಿಕಾಪ್ಟರ್‌ಗೆ ಏರುವ ಸಂದರ್ಭ ಹೆಲಿಕಾಪ್ಟರ್‌ನ ಹಿಂಬದಿಯ ರೂಟರ್ ಬ್ಲೇಡ್ ಬಡಿದು ಮೃತಪಟ್ಟ ಘಟನೆ ರವಿವಾರ ಸಂಜೆ ಕೇದಾರನಾಥದಲ್ಲಿ ಸಂಭವಿಸಿದೆ.
ಗರ್ವಾಲ್ ಮಂಡಲ್ ವಿಕಾಸ ನಿಗಮದ ಹೆಲಿಪ್ಯಾಡ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ರುದ್ರಪ್ರಯಾಗ ಜಿಲ್ಲಾ ವಿಕೋಪ ನಿರ್ವಹಣಾ ಅಧಿಕಾರಿ ಎನ್.ಎ.ರಾಜ್ವಾರ್ ಹೇಳಿದ್ದಾರೆ.
2017ನೇ ಬ್ಯಾಚ್‌ನ ರಾಜ್ಯ ಹಣಕಾಸು ಸೇವೆಗಳ ಅಧಿಕಾರಿಯಾಗಿದ್ದ ಸೈನಿ, ಎ. 25ರಂದು ಆರಂಭವಾಗಲಿರುವ ಕೇದಾರನಾಥ ಯಾತ್ರೆ ಹಿನ್ನೆಲೆಯಲ್ಲಿ ಪರಿಶೋಧನೆ ಮತ್ತು ತಪಾಸಣೆ ಸಂಬಂಧಿ ಕಾರ್ಯಕ್ಕಾಗಿ ಇತರ ಅಧಿಕಾರಿಗಳ ಜತೆ ರವಿವಾರ ಮುಂಜಾನೆ ಡೆಹ್ರಾಡೂನ್‌ನಿಂದ ತೆರಳಿದ್ದರು.
ತಮ್ಮ ಕರ್ತವ್ಯ ಮುಗಿಸಿ ಡೆಹ್ರಾಡೂನ್‌ಗೆ ವಾಪಸ್ಸಾಗುವ ಮುನ್ನ ಈ ಘಟನೆ ಸಂಭವಿಸಿದೆ. ಕೆಸ್ಟ್ರೆಲ್ ಏವಿಏಷನ್ ಕಂಪನಿಯ ಹೆಲಿಕಾಪ್ಟರ್ ಏರಲು ಅಧಿಕಾರಿ ಪ್ರಯತ್ನಿಸುತ್ತಿದ್ದಾಗ, ಹೆಲಿಕಾಪ್ಟರ್‌ನ ಬ್ಲೇಡ್‌ಗೆ ಸಿಕ್ಕಿಹಾಕಿಕೊಂಡರು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
"ಹೆಲಿಕಾಪ್ಟರ್ ಏರಲು ವಿರುದ್ಧ ದಿಕ್ಕಿನಿಂದ ಅಧಿಕಾರಿ ಆಗಮಿಸಿದಾಗ, ಪೈಲಟ್ ಇನ್ನೊಂದು ಕಡೆಯಿಂದ ಹೆಲಿಕಾಪ್ಟರ್ ಏರುವಂತೆ ಸೂಚಿಸಿದರು. ಶಿಷ್ಟಾಚಾರದ ಪ್ರಕಾರ ಹೆಲಿಕಾಪ್ಟರ್ ಎದುರಿನಿಂದ ಬರುವ ಬದಲು ಹಿಂಬದಿಯಿಂದ ಬಂದರು. ಆಗ ಹೆಲಿಕಾಪ್ಟರ್‌ನ ಹಿಂಬದಿ ಬ್ಲೇಡ್‌ಗೆ ಸಿಕ್ಕಿಹಾಕಿಕೊಂಡರು" ಎಂದು ರುದ್ರಪ್ರಯಾಗ್ ಎಸ್ಪಿ ವಿಶಾಖಾ ಅಶೋಕ್ ಭದಾನೆ ಹೇಳಿದ್ದಾರೆ.