ಮಹಾರಾಷ್ಟ್ರದಲ್ಲಿ ಶಿಂಧೆ ಸರಕಾರ ಹೆಚ್ಚು ದಿನ ಉಳಿಯುವುದು ಬಿಜೆಪಿಗೆ ಇಷ್ಟವಿಲ್ಲ: ಸಂಜಯ್ ರಾವುತ್

Update: 2023-04-24 08:49 GMT

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ  ಏಕನಾಥ್ ಶಿಂಧೆ ಅವರನ್ನು ಪದಚ್ಯುತಗೊಳಿಸಲು ದಿಲ್ಲಿ ಮಟ್ಟದಲ್ಲಿ ಚರ್ಚೆಗಳು  ನಡೆಯುತ್ತಿವೆ ಹಾಗೂ ಈ ಸರಕಾರವು  ಹೆಚ್ಚು ದಿನ ಉಳಿಯುವುದು ಬಿಜೆಪಿಗೆ ಇಷ್ಟವಿಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಹಾಗೂ  ಸಂಸದ ಸಂಜಯ್ ರಾವುತ್(Sanjay Raut) ಸೋಮವಾರ ಹೇಳಿದ್ದಾರೆ.

ಮಹಾರಾಷ್ಟ್ರ ಸರಕಾರವು ಪಕ್ಷಕ್ಕೆ ಹಾನಿ ಮಾಡುತ್ತಿದೆ ಎಂಬುದನ್ನು ಬಿಜೆಪಿ ಅರಿತುಕೊಂಡಿದೆ ಎಂದು ರಾವುತ್ ಅವರು ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ ಸರಕಾರಕ್ಕೆ ಯಾವುದೇ ಬೆದರಿಕೆ ಇಲ್ಲ, ಆದರೆ ಮುಖ್ಯಮಂತ್ರಿಯನ್ನು ಬದಲಾಯಿಸಲು ದಿಲ್ಲಿಯಲ್ಲಿ ಗಂಭೀರ ಮಾತುಕತೆ ನಡೆಯುತ್ತಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ  ನಾಯಕ ಛಗನ್ ಭುಜಬಲ್ ನೀಡಿದ ಹೇಳಿಕೆಗೆ ರಾವುತ್ ಪ್ರತಿಕ್ರಿಯಿಸಿದರು.

“ಛಗನ್ ಭುಜಬಲ್ ಹೇಳಿದ್ದು ನಿಜ. ನಾನು ಅವರ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ದಿಲ್ಲಿಯಲ್ಲಿ ಮಹಾರಾಷ್ಟ್ರದ ಸಿಎಂ ಬದಲಾವಣೆಯ ದಿಕ್ಕಿನತ್ತ ಚರ್ಚೆ ಸಾಗುತ್ತಿದೆ. ಇದರ ಹಿಂದಿನ ಕಾರಣ ಎಲ್ಲರಿಗೂ ಗೊತ್ತು. ಮುಖ್ಯಮಂತ್ರಿಯಾದ ನಂತರ ಅವರು (ಶಿಂಧೆ) ಬಿಜೆಪಿ ಬಯಸಿದ್ದನ್ನು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯವನ್ನುಸಮರ್ಥವಾಗಿ ಮುನ್ನಡೆಸಲು ಹಾಗೂ  ರಾಜಕೀಯವಾಗಿ ಬಿಜೆಪಿ ಬಯಸಿದ್ದನ್ನು ಈಡೇರಿಸಲು ಈ ಸಿಎಂ ವಿಫಲರಾಗಿದ್ದಾರೆ. ಅವರು (ಬಿಜೆಪಿ) ನಮ್ಮ ಸರಕಾರವನ್ನು ಉರುಳಿಸಲು ಬಯಸಿದ್ದರು, ಅದಕ್ಕಾಗಿ ಶಿಂಧೆ ಅವರನ್ನು ಬಳಸಿಕೊಂಡರು. ಆ ಕೆಲಸ ಈಗ ಮುಗಿದಿದೆ. ಆದರೆ ಬಿಜೆಪಿಯು ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ಸಾಧಿಸಲು ಬಯಸಿದ್ದನ್ನು ಸಾಧಿಸಲು ಸಾಧ್ಯವಾಗಲಿಲ್ಲ'' ಎಂದು ರಾವುತ್ ಹೇಳಿದರು.

“ಮುಖ್ಯಮಂತ್ರಿ (ಶಿಂಧೆ) ಬಿಜೆಪಿಗೆ ಯಾವುದೇ ರಾಜಕೀಯ ಶಕ್ತಿ ನೀಡಲು ವಿಫಲರಾಗಿದ್ದಾರೆ. ಈ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ಬಿಜೆಪಿ ಹತಾಶೆಗೆ ಒಳಗಾಗಿದ್ದು, ಶಿಂಧೆ ಬಣದ ಜತೆಗೆ ಮಾನಹಾನಿಯಾಗುತ್ತಿದೆ. ಬಿಜೆಪಿ ಇದನ್ನು ಅರಿತುಕೊಂಡಿದೆ''ಎಂದು ರಾವುತ್ ಹೇಳಿದರು.

ಪ್ರಸ್ತುತ ರಾಜ್ಯ ಸರಕಾರ 15-20 ದಿನಗಳಲ್ಲಿ ಪತನವಾಗಲಿದೆ ಎಂದು ಅವರು ಭವಿಷ್ಯ ನುಡಿದ ಒಂದು ದಿನದ ನಂತರ ರಾವುತ್ ಈ ಹೇಳಿಕೆ ನೀಡಿದ್ದಾರೆ.

''ಈಗಿನ ಸರಕಾರ ಹೆಚ್ಚು ದಿನ ಉಳಿಯುವುದಿಲ್ಲ. ಈ ಸರಕಾರ ಹೆಚ್ಚು ದಿನ ನಡೆಯುವುದು ಬಿಜೆಪಿಗೆ ಇಷ್ಟವಿಲ್ಲ. ಈ ಸರಕಾರ ಎಷ್ಟು ದಿನ ಓಡುತ್ತೋ ಅಷ್ಟು ದಿನ ಬಿಜೆಪಿ ಅಂತ್ಯವಾಗುತ್ತದೆ. ಈ ಸರಕಾರದಿಂದ ಬಿಜೆಪಿ ನಷ್ಟ ಅನುಭವಿಸುತ್ತಿದೆ. ಮುಖ್ಯಮಂತ್ರಿ ಬದಲಾದಾಗ ಸರಕಾರವೂ ಬದಲಾಗುತ್ತದೆ'' ಎಂದಿದ್ದರು.

Similar News