×
Ad

ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ಪುತ್ರ ಪಂಕಜ್ ಭಾರತದ ಸೈಕ್ಲಿಂಗ್ ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

Update: 2023-04-24 20:38 IST

ಹೊಸದಿಲ್ಲಿ, ಎ.24: ನೊಯ್ಡದ ಬಿಜೆಪಿ ಶಾಸಕ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ ನೈನಿತಾಲ್‌ನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಭಾರತದ ಸೈಕ್ಲಿಂಗ್ ಒಕ್ಕೂಟದ(ಸಿಎಫ್‌ಐ)ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸತತ ಎರಡನೇ ವರ್ಷ ಮಣಿಂದರ್ ಪಾಲ್ ಸಿಂಗ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ಕೇರಳದ ಸುದೀಶ್ ಕುಮಾರ್ ಖಜಾಂಚಿಯಾಗಿ ಆಯ್ಕೆಯಾದರು. ಎಜಿಎಂನಲ್ಲಿ ಸಿಎಫ್‌ಐಗೆ ಒಳಪಟ್ಟ 26 ರಾಜ್ಯಗಳು ಹಾಗೂ ಮಂಡಳಿಗಳು ಭಾಗವಹಿಸಿದವು.

ಕಾರ್ಯಕಾರಿ ಕೌನ್ಸಿಲ್‌ನಲ್ಲಿ ಉತ್ತರಪ್ರದೇಶ, ದಿಲ್ಲಿ, ಹರ್ಯಾಣ, ಉತ್ತರಾಖಂಡ, ಗುಜರಾತ್, ಕೇರಳ, ತೆಲಂಗಾಣ ಎರಡು ಸದಸ್ಯರುಗಳು ಆಯ್ಕೆಯಾದರೆ, ಚಂಡಿಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ, ಜಾರ್ಖಂಡ್, ಬಿಹಾರ, ತಮಿಳುನಾಡು, ಒಡಿಶಾ, ಹಿಮಾಚಲಪ್ರದೇಶ ಹಾಗೂ ಅಂಡಮಾನ್ ಹಾಗೂ ನಿಕೊಬಾರ್‌ನ ತಲಾ ಒಂದು ಸದಸ್ಯರು ಆಯ್ಕೆಯಾದರು.

ತನಗೆ ಬೆಂಬಲ ನೀಡಿದ ಎಲ್ಲ ಸದಸ್ಯರುಗಳಿಗೆ ಧನ್ಯವಾದ ತಿಳಿಸಿದ ಪಂಕಜ್ ಸಿಂಗ್, "ಕೇವಲ ಸೈಕ್ಲಿಸ್ಟ್ ಗೆ ಮಾತ್ರವಲ್ಲ ಭಾರತದ ಕ್ರೀಡಾಪಟುಗಳು ಉತ್ತಮ ವ್ಯವಸ್ಥೆಗಳನ್ನು ಪಡೆಯುವುದನ್ನು ಖಚಿತಪಡಿಸುವೆ. ತಳ ಮಟ್ಟದ ಕಾರ್ಯಕ್ರಮದತ್ತ ಗಮನ ಕೇಂದ್ರೀಕರಿಸುವೆ'' ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಸದ್ಯ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

Similar News