ಉದ್ಯೋಗ ಸೃಷ್ಠಿಗಾಗಿ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿ: ಡಿ.ಕೆ.ಶಿವಕುಮಾರ್ ಭರವಸೆ

Update: 2023-04-24 16:01 GMT

ಉಡುಪಿ: ಯುವ ಸಮುದಾಯದ ಜ್ಞಾನ ಭಂಡಾರವೇ ಉಡುಪಿ ಜಿಲ್ಲೆಯಲ್ಲಿದೆ. ಇಲ್ಲಿನ ಪ್ರತಿಭಾವಂತ ಯುವಕರು ಉದ್ಯೋಗ ಅರಸಿ ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಹೋಗುವುದನ್ನು ತಪ್ಪಿಸಿ, ಇಲ್ಲೇ ಉದ್ಯೋಗ ಸೃಷ್ಠಿ ಮಾಡುವ ಉದ್ದೇಶದಿಂದ ಕರಾವಳಿ ಪ್ರದೇಶದಲ್ಲಿ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಕಾಂಗ್ರೆಸ್ ವತಿಯಿಂದ ಉಡುಪಿ ನಗರದಲ್ಲಿ ಇಂದು ಹಮ್ಮಿ ಕೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಂತರ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಪ್ರಣಾಳಿಕೆ ರಚಿಸುವುದಾಗಿ ನಾವು ಭರವಸೆ ನೀಡಿದ್ದೇವೆ. 10 ಕೆ.ಜಿ. ಉಚಿತ ಅಕ್ಕಿಯಲ್ಲಿ ಈ ಭಾಗದ ಜನರಿಗೆ ಕುಚ್ಚಲಕ್ಕಿ ಕೊಡುವ ಬಗ್ಗೆ ಚಿಂತನೆ ಮಾಡುತ್ತೇವೆ. ಮೇ 10 ಕೇವಲ ಮತದಾನದ ದಿನ ಮಾತ್ರವಲ್ಲ, ಅದು ಭ್ರಷ್ಟಾಚಾರವನ್ನು ಒದ್ದೊಡಿಸುವ ಮತ್ತು ಜನರ ಭವಿಷ್ಯವನ್ನು ನಿರ್ಮಿಸುವ ದಿನವಾಗಬೇಕು ಎಂದರು.

ಡಬಲ್ ಇಂಜಿನ್ ಸರಕಾರದಿಂದ ಯಾರ ಜೀವನದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ಯಾವುದೇ ವರ್ಗಕ್ಕೂ ಅಚ್ಚೆ ದಿನ್ ಬರಲಿಲ್ಲ. ರೈತರು, ಮೀನುಗಾರರ ಬದುಕಿನಲ್ಲೂ ಬದಲಾವಣೆ ಆಗಿಲ್ಲ. ಬಿಜೆಪಿ ಪ್ರಾಣಾಳಿಕೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಇಂದು ಭ್ರಷ್ಟಾಚಾರದ ಪರಿಣಾಮ ವಿಧಾನ ಸೌಧದ ಗೋಡೆಗಳು ಕೂಡ ಹಣ ಹಣ ಎಂದು ಹೇಳುತ್ತಿದೆ. ಆದರೆ ನಾವು ಇದನ್ನೆಲ್ಲ ತೊಲಗಿಸಿ ಶುದ್ಧ ಆಡಳಿತ ಕೊಡಲು ಬದ್ಧರಾಗಿದ್ದೇವೆಂದು ಅವರು ಹೇಳಿದರು.

ಜನರ ಭಾವನೆಯೊಂದಿಗೆ ಆಟ ಆಡುವ ಬಿಜೆಪಿ ಕೇವಲ ಹಲಾಲ್, ಹಿಜಾಬ್ ವಿವಾದವನ್ನೇ ತನ್ನ ಆಡಳಿತದಲ್ಲಿ ಮಾಡಿಕೊಂಡು ಬಂದಿದೆ. ಅದು ಬಿಟ್ಟು ಗ್ಲೋಬಲ್ ಇನ್ಸೆಸ್ಟರ್ ಮೀಟ್‌ನಲ್ಲಿ ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದಲ್ಲಿ 500 ಕೋಟಿ ರೂ. ಹೂಡಿಕೆ ಮಾಡಲು ಕೂಡ ಇವರಿಗೆ ಸಾಧ್ಯ ವಾಗಿಲ್ಲ. ಇದಕ್ಕೆಲ್ಲ ಇವರ ದುರಾಡಳಿತವೇ ಕಾರಣ ಎಂದು ಅವರು ಟೀಕಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಪ್ರಸಾದ್‌ ರಾಜ್ ಕಾಂಚನ್, ಕಾಪು ವಿಧಾನಸಭಾ ಚುನಾವಣಾ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಎಂ.ಎ.ಗಫೂರ್, ಅಮೃತ್ ಶೆಣೈ, ಪ್ರಖ್ಯಾತ್ ಶೆಟ್ಟಿ, ವರೋನಿಕಾ ಕರ್ನೆಲಿಯೋ, ಇಸ್ಮಾಯಿಲ್ ಆತ್ರಾಡಿ, ಫಾ.ವಿಲಿಯಂ ಮಾರ್ಟಿಸ್, ಭಾಸ್ಕರ್ ರಾವ್ ಕಿದಿಯೂರು, ಯತೀಶ್ ಕರ್ಕೇರ, ಶಬ್ಬೀರ್ ಅಹ್ಮದ್, ಸರಳ ಕಾಂಚನ್, ದಿವಾಕರ್ ಕುಂದರ್, ವಿಶ್ವಾಸ್ ಅಮೀನ್, ದೀಪಕ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

‘ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್ ಬಹಳ ದೊಡ್ಡ ಸಂಘಟನೆ ಕಟ್ಟುತ್ತೇನೆ ಎಂದು ಬಿಜೆಪಿಗೆ ಹೋದರು. ಆದರೆ ಅವರು ಈಗ ಅಲ್ಲಿ ಕೆಳಗಡೆ ಕುಳಿತುಕೊಳ್ಳುತ್ತಿದ್ದರೆ, ನಮ್ಮ ನಾಯಕರು ವೇದಿಕೆ ಮೇಲೆ ಕುಳಿತುಕೊಳ್ಳುತ್ತಿ ದ್ದಾರೆ. ಅವರ ಹಿಂದೆ ಒಬ್ಬನೇ ಕಾರ್ಯಕರ್ತ ಹೋಗಿಲ್ಲ. ಇಂದು ಪ್ರಮೋದ್ ಮಧ್ವರಾಜ್ ರಾಜಕೀಯ ಬದುಕು ಅಂತ್ಯ ಆಗುವ ಸ್ಥಿತಿಯಲ್ಲಿದೆ’
-ಡಿ.ಕೆ.ಶಿವಕುಮಾರ್, ಅಧ್ಯಕ್ಷರು, ಕೆಪಿಸಿಸಿ

ಡಿಕೆಶಿ ಭರ್ಜರಿ ರೋಡ್ ಶೋ!

ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಡುಪಿ ನಗರದಲ್ಲಿಂದು ಭರ್ಜರಿ ರೋಡ್ ಶೋ ನಡೆಸಿದರು. ಉಡುಪಿ ಸಿಟಿ ಬಸ್ ಸ್ಟಾಂಡ್‌ನಿಂದ ಆರಂಭಗೊಂಡ ಪಾದಯಾತ್ರೆಯು ಕೆ.ಎಂ.ಮಾರ್ಗ, ಕೋರ್ಟ್ ರೋಡ್, ಜೋಡುಕಟ್ಟೆ ಮಾರ್ಗವಾಗಿ ಅಜ್ಜರ ಕಾಡು ಹುತಾತ್ಮರ ಸ್ಮಾರಕದ ಎದುರು ಸಮಾಪ್ತಿಗೊಂಡಿತು. ಇದರಲ್ಲಿ ಡಿಕೆ ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಸೇರಿದಂತೆ ಹಲವು ನಾಯಕರು ಹಾಗೂ ಸಹಸ್ರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Similar News