ಚರ್ಚ್ ಗಳ ಮೇಲಿನ ದಾಳಿ ತಡೆಯಿರಿ: ಪ್ರಧಾನಿ ಮೋದಿಗೆ ಕೇರಳ ಬಿಷಪ್‍ಗಳ ಆಗ್ರಹ
ಕೊಚ್ಚಿ: ದೇಶದಲ್ಲಿ ಕ್ರೈಸ್ತರ ಶ್ರದ್ಧಾಕೇಂದ್ರಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೇರಳದ (Kerala) ಎಂಟು ಚರ್ಚ್ ಪ್ರಾಂತ್ಯಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಆಗ್ರಹಿಸಿದ್ದಾರೆ.
ಈ ದೌರ್ಜನ್ಯ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಜತೆಗಿನ ಅರ್ಧ ಗಂಟೆಯ ಭೇಟಿ ವೇಳೆ ಬಿಷಪ್‍ಗಳು ಆಗ್ರಹಿಸಿದರು.
ಕ್ರೈಸ್ತಧರ್ಮಕ್ಕೆ ಮತಾಂತರಗೊಂಡವರಿಗೆ ಕೂಡಾ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದಾಗಿ ಉನ್ನತ ಮೂಲಗಳು ಹೇಳಿವೆ ಎಂದು timesofindia ವರದಿ ಮಾಡಿದೆ.
ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ಮುಖ್ಯವಾಗಿ ಕ್ರಿಶ್ಚಿಯನ್ನರ ಮೇಲೆ ಕಣ್ಣಿಟ್ಟು ಚುನಾವಣಾ ಕಾರ್ಯತಂತ್ರವನ್ನು ಬಿಜೆಪಿ ಸಿದ್ಧಪಡಿಸಿರುವ ಹಿನ್ನೆಲೆಯಲ್ಲಿ ಕ್ರೈಸ್ತ ಧಾರ್ಮಿಕ ಮುಖಂಡರ ಜತೆ ಮೋದಿ ಮಾತುಕತೆ ಆಯೋಜಿಸಲಾಗಿತ್ತು.
ಸಿಆರ್‍ಝೆಡ್ ನಿರ್ಬಂಧಗಳಿಂದಾಗಿ ಕರಾವಳಿ ಪ್ರದೇಶದಲ್ಲಿ ಮೀನುಗಾರರಿಗೆ ಮನೆ ನಿರ್ಮಿಸಲು ಆಗಿರುವ ತೊಡಕಿನ ಬಗ್ಗೆಯೂ ಪ್ರಧಾನಿಗೆ ಮನವರಿಕೆ ಮಾಡಿಕೊಡಲಾಯಿತು. ಶಾಸನಸಭೆಯಲ್ಲಿ ಆಂಗ್ಲೋ ಇಂಡಿಯನ್ನರಿಗೆ ಇದ್ದ ಮೀಸಲಾತಿ ಪುನಃಸ್ಥಾಪಿಸುವಂತೆಯೂ ಒತ್ತಾಯಿಸಿದರು. ರಾಜ್ಯದ ರಬ್ಬರ್ ಬೆಳೆಗಾರರ ಸಮಸ್ಯೆ ಬಗ್ಗೆಯೂ ಪ್ರಧಾನಿಯ ಗಮನ ಸೆಳೆದರು. ವೆರೊಪೊಲಿ ಆರ್ಚ್‍ಬಿಷಪ್ ಜೋಸೆಫ್ ಕಲತಿಪರಂಬಿಲ್ ಅವರು ಮನವಿಪತ್ರವನ್ನು ಪ್ರಧಾನಿ ಮೋದಿಯವರಿಗೆ ಸಲ್ಲಿಸಿದರು.
ಕೇರಳದಲ್ಲಿ ಚರ್ಚ್‍ಗಳ ಬೆಂಬಲವನ್ನು ಮೋದಿ ಯಾಚಿಸಿದರು ಎಂದು ತಿಳಿದು ಬಂದಿದೆ.