ಕೋಮುಸೂಕ್ಷ್ಮ ಬಂಟ್ವಾಳವನ್ನು ಶಾಂತಿಯ ಬಂಟ್ವಾಳವಾಗಿ ಮಾರ್ಪಡಿಸಿದ್ದು ಬಿಜೆಪಿ ಎಂ.ಎಲ್.ಎ. ಸಾಧನೆ : ಕೃಷ್ಣದಾಸ್
ಬಂಟ್ವಾಳ : ದಕ್ಷಿಣ ಭಾರತದಲ್ಲೇ ಅತೀ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದ್ದ ಬಂಟ್ವಾಳವನ್ನು ಸಂಘರ್ಷರಹಿತ ಹಾಗೂ ಶಾಂತಿಯ ಬಂಟ್ವಾಳವಾಗಿ ಪರಿವರ್ತಿಸಿದ ಕೀರ್ತಿ ಬಿಜೆಪಿ ಶಾಸಕ ರಾಜೇಶ್ ನಾಯಕ್ ಅವರಿಗೆ ಸಲ್ಲುತ್ತದೆ ಎಂದು ಕೇರಳ ಬಿಜೆಪಿ ಕೋಶಾಧಿಕಾರಿ ಕೃಷ್ಣದಾಸ್ ಹೇಳಿದರು.
ಮಂಗಳವಾರ ಬಿ.ಸಿ. ರೋಡಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತನಾಗಿದ್ದ ರಾಜೇಶ್ ನಾಯಕ್ ಪಕ್ಷ ನೀಡಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಬಂಟ್ವಾಳದ ಶಾಸಕನಾಗಿ ಒಂದೇ ಅವಧಿಯಲ್ಲಿ ಸುಮಾರು 2 ಸಾವಿರ ಕೋಟಿಗೂ ಮಿಕ್ಕಿದ ಅಭಿವೃದ್ದಿ ಕಾಮಗಾರಿಗಳನ್ನು ನಡೆಸುವ ಮೂಲಕ ಯಶಸ್ವಿಯಾಗಿದ್ದಾರೆ. ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಎಂಎಲ್‍ಎ, ಎಂಎಲ್ಸಿ ಮಾಡುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ ಎಂದರು.
ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಚಲಾಯಿಸುವ ಎಸ್.ಡಿ.ಪಿ.ಐ ಪಕ್ಷವು ಕಾಂಗ್ರೆಸ್ ಪಕ್ಷದ ಬಿ ಟೀಂ ಆಗಿದೆ ಎಂದು ಅವರು ದೇಶವಿರೋಧಿ ಚಟುವಟಿಕೆ ನಡೆಸುವವರೊಂದಿಗೆ ಕಾಂಗ್ರೆಸ್ ಅನ್ಯೋನ್ಯ ಸಂಬಂಧ ಹೊಂದಿದೆ ಎಂದವರು ಆರೋಪಿಸಿದರು.
ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಮತ್ತೊಮ್ಮೆ ಗೆಲುವು ಸಾಧಿಸಲಿದ್ದು, ರಾಜ್ಯದಲ್ಲೂ ಬಿಜೆಪಿ ಸರಕಾರ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಶಾಸಕ ರಾಜೇಶ್ ನಾಯಕ್, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಕೇರಳ-ಪಾಲಕ್ಕಾಡ್ ಬಿಜೆಪಿ ಜಿಲ್ಲಾಧ್ಯಕ್ಷ ಹರಿದಾಸ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ರವಿಶಂಕರ್ ಮಿಜಾರ್, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪುರುಷೋತ್ತಮ ಶೆಟ್ಟಿ, ನವೀನ್ ಕುಮಾರ್, ರಂಜಿತ್ ಮೈರ ಮೊದಲಾದವರು ಉಪಸ್ಥಿತರಿದ್ದರು.