×
Ad

ನಿಷ್ಕ್ರಿಯ ಕಾರನ್ನು ಕತ್ತೆ ಮೂಲಕ ಎಳೆಯಿಸಿದ ಉದಯಪುರ ವ್ಯಕ್ತಿ: ಸಾಮಾಜಿಕ ತಾಣದಲ್ಲಿ ಆಕ್ರೋಶ

Update: 2023-04-27 12:49 IST

ಉದಯ್‌ಪುರ: ಕಾರು ಖರೀದಿಸಿದ ಕೆಲವೇ ತಿಂಗಳಲ್ಲಿ ಪದೇ ಪದೇ ರಿಪೇರಿಗೆ ಬರುತ್ತಿದ್ದ ಕಾರನ್ನು ಶೋರೂಮ್‌ ಸಿಬ್ಬಂದಿಗೆ ಕೊಂಡೊಯ್ದು ತೋರಿಸಿದರೂ ಅವರಿಂದ ಹೆಚ್ಚಿನ ಪ್ರಯೋಜನವೇನೂ ಆಗದಿದ್ದರಿಂದ ಬೇಸತ್ತ ಉದಯ್‌ಪುರ ಕಾರು ಮಾಲೀಕನೊಬ್ಬ ತನ್ನ ಕಾರನ್ನು ಕತ್ತೆಗೆ ಬಿಗಿದು ವಿಪರೀತ ಬಿಸಿಲು ಹಾಗೂ ಸಂಚಾರ ದಟ್ಟಣೆಯ ನಡುವೆ ಶೋರೂಮ್‌ ಬಳಿಗೆ ಕೊಂಡೊಯ್ದಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆತನ ಅಸೂಕ್ಷ್ಮ ನಡವಳಿಕೆಯನ್ನು ನೆಟಿಜನ್‌ಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು freepressjournal.in ವರದಿ ಮಾಡಿದೆ.

ಮಂಗಳವಾರ ಡ್ರಮ್ ಬಾರಿಸುತ್ತಾ, ತನ್ನ ಕಾರನ್ನು ಕತ್ತೆಗೆ ಬಿಗಿದು ಎಳೆಸಿದ ವ್ಯಕ್ತಿಯನ್ನು ಉದಯ್‌ಪುರ ನಿವಾಸಿಯಾದ ರಾಜ್‌ಕುಮಾರ್ ಗಾಯತ್ರಿ ಎಂದು ಗುರುತಿಸಲಾಗಿದೆ.

ಪ್ರಾಣಿಗಳ ಬಗ್ಗೆ ಇಂತಹ ಅಸೂಕ್ಷ್ಮ ನಡವಳಿಕೆ ತೋರಿರುವ ರಾಜ್‌ಕುಮಾರ್ ಗಾಯತ್ರಿಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಈ ಪೈಕಿ ಕೆಲವರು ಈ ಕೃತ್ಯವನ್ನು ಪ್ರಾಣಿ ಹಿಂಸೆ ಎಂದು ಟೀಕಿಸಿದ್ದು, ಮತ್ತೆ ಕೆಲವರು ಕಾರು ಸಾಗಿಸಲು ಕ್ರೇನ್ ಬಳಸದ ಕಾರು ಮಾಲಕನನ್ನೇ ಕತ್ತೆ ಎಂದು ಜರಿದಿದ್ದಾರೆ.

ರಾಜ್‌ಕುಮಾರ್ ಚಿಕ್ಕಪ್ಪ ಶಂಕರ್‌ಲಾಲ್ ಅವರು ಮಾದ್ರಿ ಕೈಗಾರಿಕಾ ಪ್ರದೇಶದಿಂದ ರೂ. 17 ಲಕ್ಷ ಮೌಲ್ಯದ ಕಾರು ಖರೀದಿಸಿ ತಂದಿದ್ದರು. ಆದರೆ, ಆ ಕಾರು ಪದೇ ಪದೇ ರಿಪೇರಿಗೊಳಗಾಗುತ್ತಿತ್ತು ಮತ್ತು ಅದನ್ನು ಚಾಲೂ ಮಾಡಲು ಅನೇಕ ಬಾರಿ ನೂಕಬೇಕಾಗುತ್ತಿತ್ತು ಎಂದು Times of India ವರದಿ ಮಾಡಿದೆ. ಕಾರು ಮಾರಾಟ ಸಂಸ್ಥೆಯ ಪ್ರತಿನಿಧಿಯೊಬ್ಬರ ಸಲಹೆಯಂತೆ ಬ್ಯಾಟರಿಯನ್ನು ಚಾರ್ಜ್ ಮಾಡಲು ಸ್ವಲ್ಪ ದೂರ ಓಡಿಸಿದರೂ ಆ ಪ್ರಯತ್ನವೂ ವಿಫಲಗೊಂಡಿದೆ. ಕೊನೆಗೆ ಕಾರು ಬದಲಾಯಿಸಿಕೊಡುವಂತೆ ಒತ್ತಾಯಿಸಿರುವ ಆ ವ್ಯಕ್ತಿಯು ಕಾರನ್ನು ಶೋರೂಮ್‌ಗೆ ಕೊಂಡೊಯ್ದಿದ್ದಾನೆ ಎಂದು ಅದು ವರದಿ ಮಾಡಿದೆ.

Similar News