×
Ad

'ಸುಸೈಡ್‌ ನೋಟ್‌' ಉಲ್ಲೇಖದೊಂದಿಗೆ ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ ಮೋದಿ: ಪ್ರಿಯಾಂಕ ಗಾಂಧಿ ಆಕ್ರೋಶ

ಖಿನ್ನತೆ, ಆತ್ಮಹತ್ಯೆ ನಗುವ ವಿಚಾರವಲ್ಲ ಎಂದ ಕಾಂಗ್ರೆಸ್ ನಾಯಕಿ

Update: 2023-04-27 13:34 IST

ಹೊಸದಿಲ್ಲಿ: ಸುಸೈಡ್‌ ನೋಟ್‌ ಉಲ್ಲೇಖದೊಂದಿಗೆ ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಕಾಂಗ್ರೆಸ್‌ (Congress) ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ (Priyanka Gandhi Vadra) ಕಿಡಿಕಾರಿದ್ದಾರೆ. ಈ ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ ಹಾಗೂ ಅದನ್ನು ಕೇಳಿ ಮನತುಂಬಿ ನಕ್ಕ ಎಲ್ಲರೂ  ಮಾನಸಿಕ ಆರೋಗ್ಯ ವಿಷಯಗಳನ್ನು ಈ ರೀತಿ ಅಸಂವೇದಿತನದಿಂದ ನೋಡುವ ಬದಲು ಸ್ವಲ್ಪ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಪ್ರಿಯಾಂಕ ಹೇಳಿದ್ದಾರೆ.

ಬುಧವಾರ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಪ್ರಧಾನಿ, ಪ್ರೊಫೆಸರ್‌ ಒಬ್ಬರು ತಮ್ಮ ಪುತ್ರಿ ಬರೆದಿದ್ದ ಸುಸೈಡ್‌ ನೋಟ್‌ ಒಂದನ್ನು ಓದುವ ವೇಳೆಗೆ, ತಾನು ಇಷ್ಟು  ವರ್ಷ ಕಷ್ಟಪಟ್ಟ ಹೊರತಾಗಿಯೂ ಆಕೆ ಸ್ಪೆಲ್ಲಿಂಗ್‌ ತಪ್ಪಾಗಿ ಬರೆದಿರುವುದನ್ನು ಎತ್ತಿ ತೋರಿಸಿದ್ದರು ಎಂದು ಹೇಳಿದ್ದಾರೆ.

ನಿರ್ದಿಷ್ಟ ವಾಹಿನಿಯ ಸಂಪಾದಕರು ಹಿಂದಿ ಭಾಷೆಯಲ್ಲಿ ಚೆನ್ನಾಗಿ ಮಾತನಾಡುತ್ತಿದ್ದಾರೆಂಬುದನ್ನು ಹೇಳುವ ಸಂದರ್ಭ ಪ್ರಧಾನಿ ಈ ಹಾಸ್ಯ ಚಟಾಕಿ ಹಾರಿಸಿದ್ದರು.

ಈ ಸಂದರ್ಭದ ವೀಡಿಯೋವನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ ಪ್ರಿಯಾಂಕ ಗಾಂಧಿ ವಾದ್ರಾ, “ಖಿನ್ನತೆ ಮತ್ತು ಆತ್ಮಹತ್ಯೆ, ಪ್ರಮುಖವಾಗಿ ಯುವಜನತೆಯಲ್ಲಿ ನಗುವ ವಿಚಾರವಲ್ಲ. ಎನ್‌ಸಿಆರ್‌ಬಿ ಡೇಟಾ ಪ್ರಕಾರ 2021 ರಲ್ಲಿ1,64,033  ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನವರು. ಇದು ದುರಂತ, ಹಾಸ್ಯವಲ್ಲ,” ಎಂದು ಬರೆದಿದ್ದಾರೆ.

ತಮ್ಮ ಟ್ವೀಟ್‌ ಜೊತೆಗೆ ಪ್ರಿಯಾಂಕ ಅವರು ಪ್ರಧಾನಿ ಮೋದಿ ಹಾಗೂ ಮಾನಸಿಕ ಆರೋಗ್ಯ ಸಂಬಂಧಿ ವಿಚಾರಗಳನ್ನ ನಿರ್ವಹಿಸುವ 'ದಿ ಲಿವ್‌ ಲವ್‌ ಲಾಫ್‌ ಫೌಂಡೇಶನ್‌' ಅನ್ನು ಟ್ಯಾಗ್‌ ಮಾಡಿದ್ದಾರೆ.

Similar News