×
Ad

ಹತಾಶೆಯಿಂದ ಅತಿರೇಕದ ಹೇಳಿಕೆಗಳನ್ನು ನೀಡುವ ಸರದಿ ಈಗ ಮೋದಿಯದ್ದು: ಪ್ರಧಾನಿಗೆ ಜೈರಾಮ್ ರಮೇಶ್ ತಿರುಗೇಟು

ಕಾಂಗ್ರೆಸ್ ನಿಂದ ಸುಳ್ಳು ಗ್ಯಾರಂಟಿ ಎಂದಿದ್ದ ಪ್ರಧಾನಿ

Update: 2023-04-27 15:12 IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ  ‘ಕಾಂಗ್ರೆಸ್ ಎಂದರೆ ಸುಳ್ಳು ಗ್ಯಾರಂಟಿ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, 'ಪ್ರಧಾನಿ ನಿರಾಶೆ ಹಾಗೂ ಹತಾಶೆಗೊಳಗಾಗಿ  ಈ ಹೇಳಿಕೆ ನೀಡಿದ್ದಾರೆ' ಎಂದು ಹೇಳಿದ್ದಾರೆ.

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಗುರುವಾರ ಮಾತನಾಡಿದರು.

"ಅಮಿತ್ ಶಾ ಹಾಗೂ ಆದಿತ್ಯನಾಥ್  ನಂತರ, ನಿರಾಶೆ ಹಾಗೂ  ಹತಾಶೆಯಿಂದ ಅತಿರೇಕದ ಹೇಳಿಕೆಗಳನ್ನು ನೀಡುವ ಸರದಿ ಈಗ ಮೋದಿಯವರದ್ದು" ಎಂದು ಟ್ವಿಟರ್‌ನಲ್ಲಿ ಕಾಂಗ್ರೆಸ್ ಮಾಧ್ಯಮ ಘಟಕದ ಉಸ್ತುವಾರಿ ರಮೇಶ್ ಬರೆದಿದ್ದಾರೆ.

ಮೇ 10 ರಂದು ಕರ್ನಾಟಕದ ಜನರು ಬಿಜೆಪಿ 40% ಕಮಿಷನ್ ಸರಕಾರವನ್ನು ಕೊನೆಗೊಳಿಸುವ ಬಗ್ಗೆ  ಗ್ಯಾರಂಟಿ ನೀಡಲಿದ್ದಾರೆ. ಕೆಲವು ದಿನಗಳ ನಂತರ ನಾವು ರಾಜಸ್ಥಾನ, ಛತ್ತೀಸ್ ಗಡ ಹಾಗೂ ಹಿಮಾಚಲಪ್ರದೇಶ ರಾಜ್ಯಗಳಂತೆ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

"ಬಿಜೆಪಿಗೆ  ಕರ್ನಾಟಕವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದು ಈಗ ಸ್ಪಷ್ಟವಾಗಿದೆ. ಕಾಂಗ್ರೆಸ್ ನಾಯಕತ್ವದ ಪ್ರಚಾರಗಳಿಗೆ ಜನರ ಪ್ರತಿಕ್ರಿಯೆಯು ಅಮೋಘವಾಗಿದೆ. ಇದು ಅಮಿತ್ ಶಾ ಅವರ 4-I ತಂತ್ರವಾಗಿರುವ ಅವಮಾನ, ಉರಿ, ಪ್ರಚೋದನೆ ಹಾಗೂ  ಬೆದರಿಕೆಯನ್ನು ವಿವರಿಸುತ್ತದೆ. ಶಾ ಅವರಿಗೆ ನಾಚಿಗೆಯಾಗಬೇಕು. ಈ ವಿಚಾರವನ್ನು ನಾವು ಚುನಾವಣಾ ಆಯೋಗ ಬಳಿ ಎತ್ತುತ್ತೇವೆ'' ಎಂದು  ಮತ್ತೊಂದು ಟ್ವೀಟ್ ನಲ್ಲಿ ರಮೇಶ್ ಬರೆದಿದ್ದಾರೆ.

ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ವರ್ಚುವಲ್ ಭಾಷಣದಲ್ಲಿ ಪ್ರಧಾನಿ ,  "ಕಾಂಗ್ರೆಸ್ ಎಂದರೆ ಸುಳ್ಳು ಭರವಸೆ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗ್ಯಾರಂಟಿ. ಕಾಂಗ್ರೆಸ್ ಯಾವುದೇ ಗ್ಯಾರಂಟಿ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಅದರ ವಾರಂಟಿ ಕೂಡ ಅವಧಿ ಮೀರಿದೆ" ಎಂದು  ಹೇಳಿದ್ದರು.

Similar News