ʻಆತ್ಮಹತ್ಯೆʼ ಕುರಿತು ಪ್ರಧಾನಿ ಮೋದಿಯ ಹಾಸ್ಯಕ್ಕೆ ವ್ಯಾಪಕ ಆಕ್ರೋಶ

Update: 2023-04-27 10:19 GMT

ಹೊಸದಿಲ್ಲಿ: ಬುಧವಾರ ನಡೆದ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರಿ ಮೋದಿ ಯುವತಿಯೊಬ್ಬಳ ಆತ್ಮಹತ್ಯೆ ಉಲ್ಲೇಖವಿರುವ ಜೋಕ್‌ ಒಂದನ್ನು ಹೇಳಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ ಹಾಗೂ ಪ್ರಧಾನಿಯ 'ಸಂವೇದನಾರಹಿತ ತಮಾಷೆಗೆ' ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ.

ಟಿವಿ ವಾಹಿನಿಯೊಂದರಲ್ಲಿ ನೇರ ಪ್ರಸಾರಗೊಂಡ ಪ್ರಧಾನಿಯ ಹಿಂದಿ ಭಾಷಣದಲ್ಲಿ ಅವರು ಹೀಗೆ ಹೇಳಿದ್ದರು. “ನಮ್ಮ ಬಾಲ್ಯದಲ್ಲಿ ನಾವು ಒಂದು ಜೋಕ್‌ ಕೇಳಿದ್ದೆವು. ಅದನ್ನು ಹೇಳುತ್ತೇನೆ. ಒಬ್ಬ ಪ್ರೊಫೆಸರ್‌  ಇದ್ದರು, ಅವರ ಪುತ್ರಿ ಆತ್ಮಹತ್ಯೆಗೈದಿದ್ದಳು. ಆಕೆ ಒಂದು ಚೀಟಿ ಬಿಟ್ಟಿದ್ದಳು. “ನನಗೆ ಜೀವನ ಸಾಕಾಗಿ ಹೋಗಿದೆ. ನನಗೆ ಬದುಕುವುದು ಬೇಕಿಲ್ಲ. ಅದಕ್ಕೆ ನಾನು ಕಂಕರಿಯಾ ಕೆರೆಗೆ ಬಿದ್ದು ಸಾಯುತ್ತೇನೆ. ಬೆಳಿಗ್ಗೆ ಅವರ ಮಗಳು ಮನೆಯಲ್ಲಿರಲಿಲ್ಲ. ಆಕೆಯ ಹಾಸಿಗೆಯಲ್ಲಿ ಪತ್ರ ದೊರಕಿತು. ತಂದೆಗೆ ಸಿಟ್ಟು ಬಂತು. “ನಾನೊಬ್ಬ ಪ್ರೊಫೆಸರ್‌ ಇಷ್ಟು ವರ್ಷ ಕಷ್ಟಪಟ್ಟಿದ್ದೆ. ಈಗಲೂ ಕಂಕರಿಯಾ ಪದ ತಪ್ಪು ಬರೆದಿದ್ದಾಳೆ.”

ಇದನ್ನು ಕೇಳಿ ಸಭಿಕರು ನಗೆಗಡಲಿನಲ್ಲಿ ತೇಲಿದರು. ಪ್ರಧಾನಿ ಮೋದಿ ಕೂಡ ನಗುವುದು ಕಾಣಿಸುತ್ತದೆ.

ನಂತರ ಮಾತು ಮುಂದುವರಿಸಿದ ಪ್ರಧಾನಿ “ಅರ್ನಬ್‌ (ರಿಪಬ್ಲಿಕ್‌ ಟಿವಿ ಮುಖ್ಯಸ್ಥ) ಚೆನ್ನಾಗಿ ಹಿಂದಿ ಮಾತನಾಡಲು ಆರಂಭಿಸಿರುವುದು ಖುಷಿ ನೀಡಿದೆ,” ಎಂದರು. ಇದಕ್ಕೂ ಬಹಳಷ್ಟು ಚಪ್ಪಾಳೆ ದೊರಕಿತು.

“ಅವರೇನು ಹೇಳಿದ್ದಾರೆ ಎಂದು ನಾನು ಕೇಳಲಿಲ್ಲ ಆದರೆ ಅವರ ಹಿಂದಿಗೆ ಗಮನ ನೀಡಿದೆ, ಪ್ರಾಯಶಃ ಮುಂಬೈಯಲ್ಲಿ ನೆಲೆಸಿರುವುದರಿಂದ ಹಿಂದಿ ಸರಿಯಾಗಿ ಕಲಿತಿದ್ದೀರಿ,” ಎಂದು ಪ್ರಧಾನಿ ಹೇಳಿದರು.

ಅರ್ನಬ್‌ ಗೋಸ್ವಾಮಿಯನ್ನು ಹೊಗಳಲು ಪ್ರಧಾನಿ ಏಕೆ ಈ 'ಜೋಕ್‌' ಹೇಳಿದರೆಂದು ತಿಳಿದಿಲ್ಲ. ಆದರೆ ಅದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ ಎಂದು thewire.in ವರದಿ ಮಾಡಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಸಾವಿರಾರು ಕುಟುಂಬಗಳು ಆತ್ಮಹತ್ಯೆ ಕಾರಣ ತಮ್ಮ ಮಕ್ಕಳನ್ನು ಕಳೆದುಕೊಂಡಿವೆ. ಪ್ರಧಾನಿ ಅವರ ಬಗ್ಗೆ ತಮಾಷೆ ಮಾಡಬಾರದು,” ಎಂದು ಬರೆದಿದ್ದಾರೆ.

ರಾಷ್ಟ್ರೀಯ ಜನತಾ ದಳ ಸಂಸದ ಮನೋಜ್‌ ಕುಮಾರ್‌ ಝಾ ಪ್ರತಿಕ್ರಿಯಿಸಿ “ಆತ್ಮಹತ್ಯೆಯಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ದೇಶದ ಪ್ರಧಾನಿ ಜೋಕ್‌ ಹೇಳಿದಾಗ ಅಲ್ಲಿ ಅಸ್ವಸ್ಥತೆ ಗೋಚರವಾಗುತ್ತದೆ. ಅದಕ್ಕೂ ಹೆಚ್ಚು ಈ ಜೋಕ್‌ಗೆ ದೊರೆತ ಚಪ್ಪಾಳೆ ಹಾಗೂ ಜನರ ನಗು. ನಾವು ಬಹಳ ಅಸ್ವಸ್ಥ ಸಮಾಜವಾಗಿ ಬಿಟ್ಟಿದ್ದೇವೆ,” ಎಂದು ಬರೆದಿದ್ದಾರೆ.

ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ ಕೂಡ ಟ್ವೀಟ್‌ ಮಾಡಿ, ಭಾರತದಲ್ಲಿ 2021 ರಲ್ಲಿ ಆತ್ಮಹತ್ಯಗಳ ಎನ್‌ಸಿಆರ್‌ಬಿ ಅಂಕಿಸಂಖ್ಯೆಯನ್ನು ಉಲ್ಲೇಖಿಸಿದ್ದಾರೆ. “ಗೌರವಾನ್ವಿತ ಪ್ರಧಾನಿಗಳೇ, ನೀವು ಆತ್ಮಹತ್ಯೆಯ ಬಗ್ಗೆ ಮಾಡಿದ ಜೋಕ್‌ ಮತ್ತು ಸಭಿಕರು ಈ ಅಸಂವೇದಿತನದ ಜೋಕ್‌ಗೆ ನಕ್ಕ ಆ ಪ್ರಚೋದಕ ವೀಡಿಯೋವನ್ನು ನಾನು ಶೇರ್‌ ಮಾಡುವುದಿಲ್ಲ. ಆದರೆ 1.5 ಲಕ್ಷಕ್ಕೂ ಹೆಚ್ಚು ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿರುವ ಎನ್‌ಸಿಆರ್‌ಬಿ ಇದರ 2021 ಡೇಟಾವನ್ನು ನಿಮಗೆ ನೆನಪಿಸುತ್ತೇನೆ,” ಎಂದು ಬರೆದಿದ್ದಾರೆ.

ಆಮ್‌ ಆದ್ಮಿ ಪಕ್ಷ ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಮೂಲಕ ಟ್ವೀಟ್‌ ಮಾಡಿ “ಆತ್ಮಹತ್ಯೆ ಬಗ್ಗೆ ಹಾಸ್ಯ ಚಟಾಕಿ ಹಾರಿಸುವ  ಅಗತ್ಯವಿರುವ ನಮ್ಮ ಪ್ರಧಾನಿ ಮಾನವ ಜೀವದ ಬಗ್ಗೆ ಎಷ್ಟು ಅಸಂವೇದಿತನ ಹೊಂದಿದ್ದಾರೆ ಊಹಿಸಿ,” ಎಂದ ಪ್ರತಿಕ್ರಿಯಿಸಿದೆ.

ಸಮಾಜವಾದಿ ಪಕ್ಷದ ಗೌರವ್‌ ಪ್ರಕಾಶ್‌ ಟ್ವೀಟ್‌ ಮಾಡಿ “ಪ್ರತಿ ಒಂಬತ್ತು ನಿಮಿಷ ಭಾರತದ ಒಬ್ಬ ಮಹಿಳೆ ಆತ್ಮಹತ್ಯೆಗೈಯ್ಯುತ್ತಾಳೆʼ ಎಂಬ ದಿ ಕ್ವಿಂಟ್‌ ವರದಿ ಉಲ್ಲೇಖಿಸಿದ್ದಾರೆ.

ಪತ್ರಕರ್ತರಾದ ಸ್ವಾತಿ ಚತುರ್ವೇದಿ ಮತ್ತು ಅಭಿಷೇಕ್‌ ಬಕ್ಷಿ ಕೂಡ ಮೋದಿಯ ಈ ಜೋಕ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Similar News