ಭಾರತೀಯರಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಕಡಿಮೆ ದರದಲ್ಲಿ ಚಿಕಿತ್ಸೆ: ಪ್ರಧಾನಿ ಮೋದಿ ಭರವಸೆ
ಹೊಸದಿಲ್ಲಿ, ಎ. 27: ಭಾರತೀಯರಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವುದು ಭಾರತದ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬುಧವಾರ ‘ವನ್ ಅರ್ತ್ ವನ್ ಹೆಲ್ತ್- ಅಡ್ವಾಂಟೇಜ್ ಹೆಲ್ತ್ಕೇರ್ ಇಂಡಿಯಾ 2023’ರ ಆರನೇ ವರ್ಷದ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ನೀಡಿದ ವೀಡಿಯೊ ಸಂದೇಶವೊಂದರಲ್ಲಿ ಪ್ರಧಾನಿ ಈ ಮಾತನ್ನು ಹೇಳಿದ್ದಾರೆ.
ಒತ್ತಡ ಮತ್ತು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಭಾರತದ ಸಾಂಪ್ರದಾಯಿಕ ಆರೋಗ್ಯರಕ್ಷಣೆ ವ್ಯವಸ್ಥೆಗಳಲ್ಲಿ ಪರಿಹಾರಗಳಿವೆ ಎಂದು ಹೇಳಿದ ಅವರು, ಆರೋಗ್ಯ ರಕ್ಷಣೆ ಸವಾಲುಗಳಿಗೆ ಏಕೀಕೃತ, ಸಮಗ್ರ ಮತ್ತು ಸಾಂಸ್ಥಿಕ ಜಾಗತಿಕ ಸ್ಪಂದನದ ಅಗತ್ಯವಿದೆ ಎಂದು ಹೇಳಿದರು.
‘‘ಆಂತರಿಕ ಸಂಪರ್ಕ ಹೊಂದಿರುವ ಜಗತ್ತಿನಲ್ಲಿ ಆರೋಗ್ಯಕ್ಕೆ ಎದುರಾಗುವ ಬೆದರಿಕೆಗಳನ್ನು ಗಡಿಗಳು ತಡೆಯಲಾರವು ಎನ್ನುವುದನ್ನು ಕೋವಿಡ್ ಸಾಂಕ್ರಾಮಿಕ ತೋರಿಸಿಕೊಟ್ಟಿದೆ. ಶತಮಾನದಲ್ಲಿ ಒಮ್ಮೆ ಕಾಣಿಸಿಕೊಳ್ಳುವ ಇಂಥ ಸಾಂಕ್ರಾಮಿಕಗಳು, ಹಲವಾರು ಸತ್ಯಗಳನ್ನು ಜಗತ್ತಿಗೆ ತೋರಿಸಿಕೊಟ್ಟಿವೆ. ಜನ-ಕೇಂದ್ರಿತ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ’’ ಎಂದು ಅವರು ಹೇಳಿದರು.
ಪಶ್ಚಿಮ ಏಶ್ಯ, ದಕ್ಷಿಣ ಏಶ್ಯ ಪ್ರಾದೇಶಿಕ ಸಹಕಾರ ಸಂಘಟನೆ (ಸಾರ್ಕ್), ಆಸಿಯಾನ್ ಮತ್ತು ಆಫ್ರಿಕ ವಲಯಕ್ಕೆ ಸೇರಿದ ದೇಶಗಳ ಆರೋಗ್ಯ ಸಚಿವರು ಮತ್ತು ಪ್ರತಿನಿಧಿಗಳು ಈ ಎರಡು ದಿನಗಳ ಸಮಾವೇಶದಲ್ಲಿ ಭಾಗವಹಿಸಿದರು.