ಐಪಿಎಲ್: ಚೆನ್ನೈ ಸೂಪರ್ ಕಿಂಗ್ಸ್‌ಗೆ 203 ರನ್ ಸವಾಲು
ಯಶಸ್ವಿ ಜೈಸ್ವಾಲ್ ಅರ್ಧಶತಕ
ಜೈಪುರ, ಎ.27: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕ(77 ರನ್, 43 ಎಸೆತ, 8 ಬೌಂಡರಿ, 4 ಸಿಕ್ಸರ್)ಕೊಡುಗೆಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 203 ರನ್ ಗುರಿ ನೀಡಿದೆ.
ಬುಧವಾರ ನಡೆದ ಐಪಿಎಲ್‌ನ 37ನೇ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿತು.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜೈಪುರದಲ್ಲಿ 200ಕ್ಕೂ ಅಧಿಕ ರನ್ ಗಳಿಸಲಾಗಿದೆ. ರಾಜಸ್ಥಾನ ತಾನಾಡಿದ 200ನೇ ಐಪಿಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ವಿಶೇಷ.
ಇನಿಂಗ್ಸ್ ಆರಂಭಿಸಿದ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್(27 ರನ್, 21 ಎಸೆತ)ಮೊದಲ ವಿಕೆಟ್‌ಗೆ 86 ರನ್ ಗಳಿಸಿ ಭರ್ಜರಿ ಆರಂಭ ಒದಗಿಸಿದರು. ಜೈಸ್ವಾಲ್ ಕೇವಲ 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಐಪಿಎಲ್‌ನಲ್ಲಿ ಆರನೇ ಅರ್ಧಶತಕ ಸಿಡಿಸಿದರು.
ಪ್ರಸಕ್ತ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಜೈಸ್ವಾಲ್ ಮೂರನೇ ಅರ್ಧಶತಕ ಸಿಡಿಸಿದರು. ಧ್ರುವ್ ಜುರೆಲ್(34 ರನ್, 15 ಎಸೆತ), ದೇವದತ್ತ ಪಡಿಕ್ಕಲ್(ಔಟಾಗದೆ 27, 13 ಎಸೆತ) ಹಾಗೂ ನಾಯಕ ಸಂಜು ಸ್ಯಾಮ್ಸನ್(17 ರನ್, 17 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ತುಷಾರ್ ದೇಶಪಾಂಡೆ(2-42)ಎರಡು ವಿಕೆಟ್‌ಗಳನ್ನು ಕಬಳಿಸಿದರು.