ಉತ್ತರಪ್ರದೇಶ: ಜೈಲಿನಲ್ಲಿ ಕೈದಿ ಸಾವು; ಕುಟುಂಬದಿಂದ ಕೊಲೆ ಆರೋಪ
Update: 2023-04-27 21:43 IST
ಮೈನಪುರಿ,ಎ.27: ಉತ್ತರ ಪ್ರದೇಶದ ಮೈನಪುರಿಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಯೋರ್ವ ಶಂಕಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಆತನನ್ನು ಥಳಿಸಿ ಕೊಂದಿದ್ದಾರೆ ಎಂದು ಮೃತನ ಕುಟುಂಬವು ಆರೋಪಿಸಿದೆ. ಮೃತವ್ಯಕ್ತಿಯನ್ನು ಮೈನಪುರಿ ಕೋತ್ವಾಲಿ ಪ್ರದೇಶದ ನಿವಾಸಿ ಭುರೆ ಎಂದು ಗುರುತಿಸಲಾಗಿದೆ.
ಭುರೆ ಬಂಧನಕ್ಕಾಗಿ ನ್ಯಾಯಾಲಯವು ವಾರಂಟ್ ಹೊರಡಿಸಿದ ಬಳಿಕ ಎರಡು ದಿನಗಳ ಹಿಂದೆ ಆತನನ್ನು ಬಂಧಿಸಿದ್ದ ಪೊಲೀಸರು ಜೈಲಿಗೆ ರವಾನಿಸಿದ್ದರು.
ಜೈಲಿನಲ್ಲಿ ಭುರೆ ಆರೋಗ್ಯ ಹದಗೆಟ್ಟಿತ್ತು ಮತ್ತು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭುರೆಯ ಸೋದರನೋರ್ವ ಕೂಡ ಇದೇ ರೀತಿಯಲ್ಲಿ ಮೃತಪಟ್ಟಿದ್ದ.ಹೀಗಾಗಿ ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಆತನ ಕುಟುಂಬಕ್ಕೆ 20 ಲ.ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಮೈನಪುರಿಯ ಮಾಜಿ ಎಸ್ಪಿ ಶಾಸಕ ರಾಜು ಯಾದವ ಆಗ್ರಹಿಸಿದ್ದಾರೆ.