×
Ad

ಅಂಗ ದಾನ ಮಾಡುವ ಕೇಂದ್ರ ಸರಕಾರಿ ನೌಕರರಿಗೆ 42 ದಿನ ವಿಶೇಷ ರಜೆ

Update: 2023-04-27 21:50 IST

ಹೊಸದಿಲ್ಲಿ, ಎ. 27: ಅಂಗ ದಾನ ಮಾಡುವ ಉದ್ಯೋಗಿಗಳಿಗೆ 42 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಚೇತರಿಸಿಕೊಳ್ಳಲು ಬೇಕಾಗುವ ಸಮಯವನ್ನು ಪರಿಗಣಿಸಿ ಅದು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಸಕ್ತ, ಇಂಥ ಸಂದರ್ಭಗಳಲ್ಲಿ 30 ದಿನಗಳ ವಿಶೇಷ ರಜೆ ತೆಗೆದುಕೊಳ್ಳುವ ಅವಕಾಶವಿದೆ.

‘‘ದಾನಿಯೊಬ್ಬರಿಂದ ಅಂಗವನ್ನು ತೆಗೆಯುವುದು ದೊಡ್ಡ ಶಸ್ತ್ರಚಿಕಿತ್ಸೆಯಾಗಿದೆ. ಅದರಿಂದ ಚೇತರಿಸಿಕೊಳ್ಳಲು ಆಸ್ಪತ್ರೆಯಲ್ಲಿ ಮತ್ತು ಆಸ್ಪತ್ರೆಯಿಂದ ಹೊರಗೆ ತುಂಬಾ ಸಮಯ ಬೇಕಾಗುತ್ತದೆ’’ ಎಂದು ಸಿಬ್ಬಂದಿ ಸಚಿವಾಲಯ ಬಿಡುಗೆಗೊಳಿಸಿದ ಆದೇಶವೊಂದು ತಿಳಿಸಿದೆ.

ಇನ್ನೋರ್ವ ಮಾನವನಿಗೆ ನೆರವಾಗುವ ಶ್ರೇಷ್ಠ ಕಾರ್ಯವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರಕಾರದ ಉದ್ಯೋಗಿಗಳಲ್ಲಿ ಅಂಗ ದಾನ ಮನೋಭಾವವನ್ನು ಉತ್ತೇಜಿಸಲು ತಮ್ಮ ಅಂಗಗಳನ್ನು ಇನ್ನೋರ್ವ ಮಾನವನಿಗೆ ದಾನ ಮಾಡುವ ಕೇಂದ್ರ ಸರಕಾರದ ಉದ್ಯೋಗಿಗಳಿಗೆ 42 ದಿನಗಳ ವಿಶೇಷ ಸಾಂದಭಿರ್ಕ ರಜೆಯನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಅದು ಹೇಳಿದೆ.

1994ರ ಮಾನವ ಅಂಗಗಳ ಕಸಿ ಕಾಯ್ದೆಗೆ ಅನುಗುಣವಾಗಿ, ಸರಕಾರಿ ನೋಂದಾಯಿತ ವೈದ್ಯರಿಂದ ಅಂಗ ದಾನಕ್ಕೆ ಅಂಗೀಕಾರ ಪಡೆದುಕೊಂಡಿರುವ ಎಲ್ಲಾ ರೀತಿಯ ಅಂಗ ದಾನಿಗಳಿಗೆ ಈ ರಜೆ ಲಭಿಸುವುದು ಎಂದು ಸರಕಾರದ ಆದೇಶ ತಿಳಿಸಿದೆ.

Similar News