×
Ad

ಕುಸ್ತಿಪಟುಗಳ ಹೋರಾಟಕ್ಕೆ ಖಾಪ್, ಮಹಿಳಾ ಚಳವಳಿಗಾರರ ಬೆಂಬಲ

Update: 2023-04-28 08:22 IST

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬೃಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಹರ್ಯಾಣದ ಹಲವು ಖಾಪ್‌ಗಳು, ಮಹಿಳಾ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಿಂದ್‌ನ ಪ್ರಸಿದ್ಧ ಖಂಡೇಲಾ ಖಾಪ್ ಮುಖ್ಯಸ್ಥ ಓಂಪ್ರಕಾಶ್ ಖಂಡೇಲಾ ಈ ಬಗ್ಗೆ ಹೇಳಿಕೆ ನೀಡಿ, "ಕುಸ್ತಿಪಟುಗಳು ಇಡೀ ದೇಶಕ್ಕೆ ಸೇರಿದವರು. ಪೈಲ್ವಾನರಿಗೆ ಜಾತಿ ಇಲ್ಲ. ಧರ್ಮ ಇಲ್ಲ ಅಥವಾ ಪ್ರದೇಶ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ನಮ್ಮ ಹೆಣ್ಣುಮಕ್ಕಳಿಗಾಗಿ, ಅವರ ಭವಿಷ್ಯಕ್ಕಾಗಿ ಶುಕ್ರವಾರ ನಾವು ದೆಹಲಿ ತಲುಪಿ ಕುಸ್ತಿಪಟುಗಳ ಹೋರಾಟಕ್ಕೆ ಕೈಜೋಡಿಸಲಿದ್ದೇವೆ. ಖಾಪ್‌ಗಳು ಸದಾ ಕ್ರೀಡಾಪಟುಗಳನ್ನು ಬೆಂಬಲಿಸುತ್ತವೆ. ಬೃಜ್‌ಭೂಷಣ್ ಶರಣ್ ವಿರುದ್ಧ ಎಫ್‌ಐಆರ್ ದಾಖಲಾಗುವ ವರೆಗೂ ನಾವು ಧರಣಿ ನಡೆಸುತ್ತೇವೆ" ಎಂದು ಹೇಳಿದ್ದಾರೆ.

"ಹಿಂದೆ ಹರ್ಯಾಣ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಇತ್ತು ಆಗ ಸರ್ಕಾರ ಅವರನ್ನು ರಕ್ಷಿಸಲು ಯತ್ನಿಸಿತ್ತು. ಬೃಜ್‌ಭೂಷಣ್ ಪ್ರಕರಣದಲ್ಲೂ ಅದೇ ರೀತಿ ನಡೆಯುತ್ತಿದೆ. ಅವರು ಕೇಂದ್ರ ಸರ್ಕಾರದ ಬೆಂಬಲ ಹೊಂದಿದ್ದಾರೆ. ಇದುವರೆಗೂ ಏಕೆ ಎಫ್‌ಐಆರ್ ದಾಖಲಿಸಿಲ್ಲ" ಎಂದು ಅವರು ಪ್ರಶ್ನಿಸಿದ್ದಾರೆ.

ಫೋಗತ್ ಖಾಪ್ ಮುಖ್ಯಸ್ಥ ಬಲವಂತ್ ನಂಬರ್‌ದಾರ್ ಕೂಡಾ ಹೇಳಿಕೆ ನೀಡಿ, ಹರ್ಯಾಣದ ಎಲ್ಲ ಖಾಪ್‌ಗಳು ದೆಹಲಿಗೆ ತೆರಳಿ ಕುಸ್ತಿಪಟುಗಳ ಜತೆ ಹೋರಾಟಕ್ಕೆ ಧುಮುಕುತ್ತೇವೆ ಎಂದು ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಅಭಿಮನ್ಯು ಕುಹಾರ್ ಕೂಡಾ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಏತನ್ಮಧ್ಯೆ ರೋಹ್ಟಕ್‌ನಲ್ಲಿ ಕೇಂದ್ರದ ವಿರುದ್ಧ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

Similar News