ನೀವೆಲ್ಲ ಯಾಕೆ ಮೌನವಾಗಿದ್ದೀರಿ, ನಿಮಗೆ ಅಷ್ಟೊಂದು ಭಯವೇ?: ಖ್ಯಾತ ಕ್ರಿಕೆಟಿಗರನ್ನು ಪ್ರಶ್ನಿಸಿದ ವಿನೇಶ್ ಫೋಗಟ್
ಡಬ್ಲ್ಯುಎಫ್‌ಐ ಮುಖ್ಯಸ್ಥನ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ
ಹೊಸದಿಲ್ಲಿ: ಅವರು ಅಧಿಕಾರಸ್ಥರ ವಿರುದ್ಧ ಎದ್ದು ನಿಲ್ಲುವ ಧೈರ್ಯ ಪ್ರದರ್ಶಿಸದಿರುವುದನ್ನು ಕಂಡು ನನಗೆ ನೋವಾಗಿದೆ ಎಂದು ತಾರಾ ಕ್ರಿಕೆಟಿಗರು ಹಾಗೂ ಇನ್ನಿತರ ಖ್ಯಾತ ಕ್ರೀಡಾಪಟುಗಳತ್ತ ಬೊಟ್ಟು ಮಾಡಿ ವಿಶ್ವ ಚಾಂಪಿಯನ್‌ಶಿಪ್‌ನ ಪದಕ ವಿಜೇತ ಕುಸ್ತಿ ಪಟು ವಿನೇಶ್ ಫೋಗಟ್ ಬೇಸರ ವ್ಯಕ್ತಪಡಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬೃಜ್ ಭೂಷಣ್ ವಿರುದ್ಧ ಕುಸ್ತಿ ಪಟುಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ವಿನೇಶ್‌ರೊಂದಿಗೆ ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪುನಿಯಾ ಮುಂಚೂಣಿಯಲ್ಲಿದ್ದಾರೆ
ಬುಧವಾರ 'ದಿ ಇಂಡಿಯನ್ ಎಕ್ಸ್‌ಪ್ರೆಸ್ ಐಡಿಯಾ ಎಕ್ಸ್‌ಚೇಂಜ್ ಪ್ರೋಗ್ರಾಮ್'ನಲ್ಲಿ ಭಾಗವಹಿಸಿ ಮಾತನಾಡಿದ ವಿನೇಶ್, "ಇಡೀ ದೇಶ ಕ್ರಿಕೆಟ್ ಅನ್ನು ಆರಾಧಿಸುತ್ತದೆ. ಆದರೆ, ಒಬ್ಬನೇ ಒಬ್ಬ ಕ್ರಿಕೆಟಿಗ ಈವರೆಗೆ ದನಿ ಎತ್ತಿಲ್ಲ. ನಾವು ನಮ್ಮ ಪರವಾಗಿ ಮಾತನಾಡಿ ಎಂದು ಕೇಳುತ್ತಿಲ್ಲ. ಆದರೆ, ಕನಿಷ್ಠ ಪಕ್ಷ ಯಾವುದೇ ಪಕ್ಷಕ್ಕಾದರೂ ನ್ಯಾಯ ದೊರೆಯಬೇಕು ಎಂಬ ತಟಸ್ಥ ಸಂದೇಶ ನೀಡಬಹುದಿತ್ತು. ಅದು ಕ್ರಿಕೆಟಟಿಗರು, ಬ್ಯಾಡ್ಮಿಂಟನ್ ಆಟಗಾರರು, ಅಥ್ಲೆಟಿಕ್‌ಗಳು, ಬಾಕ್ಸರ್‌ಗಳು ಯಾರೇ ಆಗಿರಲಿ. ನನಗೆ ನೋವುಂಟು ಮಾಡಿರುವುದು ಇದೇ ಸಂಗತಿ" ಎಂದು ಖೇದ ವ್ಯಕ್ತಪಡಿಸಿದ್ದಾರೆ.
'ಕಪ್ಪುವರ್ಣೀಯರ ಜೀವಕ್ಕೂ ಬೆಲೆಯಿದೆ' ಹೋರಾಟ ಅಮೆರಿಕಾದಲ್ಲಿ ಶುರುವಾದರೂ ವಿಶ್ವಾದ್ಯಂತ ಇರುವ ಕ್ರೀಡಾಪಟುಗಳು ವರ್ಣಭೇದ ಹಾಗೂ ಶೋಷಣೆಯ ವಿರುದ್ಧ ಒಂದಾದ ನಿದರ್ಶನವನ್ನು ಅವರು ಉಲ್ಲೇಖಿಸಿದ್ದಾರೆ. "ನಮ್ಮ ದೇಶದಲ್ಲಿ ದೊಡ್ಡ ಕ್ರೀಡಾಪಟುಗಳು ಇಲ್ಲವೆಂದೇನಿಲ್ಲ. ಇಲ್ಲಿ ಕ್ರಿಕೆಟಿಗರಿದ್ದಾರೆ. ಕಪ್ಪುವರ್ಣೀಯರ ಜೀವಕ್ಕೂ ಬೆಲೆಯಿದೆ. ಹೋರಾಟ ಶುರುವಾದಾಗ ಅವರೂ ಕೂಡಾ ಆ ಹೋರಾಟವನ್ನು ಬೆಂಬಲಿಸಿದ್ದರು. ನಾವು ಅಷ್ಟು ಬೆಂಬಲ ಪಡೆಯಲೂ ಯೋಗ್ಯರಲ್ಲವೆ?" ಎಂದು ಪ್ರಶ್ನಿಸಿದ್ದಾರೆ.
ಬೃಜ್ ಭೂಷಣ್ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಬೇಕೆಂದು ಕಳೆದ ರವಿವಾರದಿಂದ ರಾಜಧಾನಿ ದಿಲ್ಲಿಯ ಜಂತರ್ ಮಂತರ್
ಎದುರು ಖ್ಯಾತ ಕುಸ್ತಿ ಪಟುಗಳು ಪ್ರತಿಭಟಿಸುತ್ತಿದ್ದಾರೆ. ಅವರ ವಿರುದ್ಧ ಓರ್ವ ಅಪ್ರಾಪ್ತ ಕುಸ್ತಿ ಪಟು ಸೇರಿದಂತೆ ಏಳು ಮಂದಿ ಕುಸ್ತಿ ಪಟುಗಳು ಲೈಂಗಿಕ ಕಿರುಕುಳ ಹಾಗೂ ಅಪರಾಧ ಉದ್ದೇಶದ ದೂರುಗಳನ್ನು ಪೊಲೀಸರೆದುರು ದಾಖಲಿಸಿದ್ದಾರೆ.
ಆದರೆ, ದಿಲ್ಲಿ ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಈ ಪ್ರತಿಭಟನಾನಿರತ ಕುಸ್ತಿ ಪಟುಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ.