ವಿಚಾರಣೆಯನ್ನು ಇನ್ನೋರ್ವ ನ್ಯಾಯಾಧೀಶರಿಗೆ ವರ್ಗಾಯಿಸಿ:ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸುಪ್ರೀಂ ನಿರ್ದೇಶನ

‘ಲಂಚ ಪಡೆದು ಶಿಕ್ಷಕರನ್ನು ನೇಮಿಸಿದ’ ಹಗರಣಕ್ಕೆ ಸಂಬಂಧಿಸಿದ ಪ್ರಕರಣ

Update: 2023-04-28 15:38 GMT
ಹೊಸದಿಲ್ಲಿ, ಎ. 28: ‘ಲಂಚ ಪಡೆದು ಶಿಕ್ಷಕರನ್ನು ನೇಮಿಸಲಾಗಿದೆ’ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯರಿಂದ ಇನ್ನೋರ್ವ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕಲ್ಕತ್ತಾ ಹೈಕೋರ್ಟ್ನ ಉಸ್ತುವಾರಿ ಮುಖ್ಯ ನ್ಯಾಯಾಧೀಶರಿಗೆ ನಿರ್ದೇಶನ ನೀಡಿದೆ. ತಾನು ವಿಚಾರಣೆ ಮಾಡುತ್ತಿರುವ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದ ಬಗ್ಗೆ ನ್ಯಾ. ಗಂಗೋಪಾಧ್ಯಾಯ ಇತ್ತೀಚೆಗೆ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಆ ಸಂದರ್ಶನದ ಪ್ರಮಾಣಿತ ಬರಹ ಪ್ರತಿಯನ್ನು ಪರಿಶೀಲಿಸಿದ ಬಳಿಕ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ‘‘ಬಾಕಿಯಿರುವ ಪ್ರಕರಣವೊಂದರ ಬಗ್ಗೆ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುವುದು ನ್ಯಾಯಾಧೀಶರ ಕೆಲಸವಲ್ಲ’’ ಎಂದು ಎಪ್ರಿಲ್ 24ರಂದು ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹೇಳಿದ್ದರು. ಈ ಬಗ್ಗೆ ಅವರು ಕಲ್ಕತ್ತಾ ಹೈಕೋರ್ಟ್ನಿಂದ ವರದಿಯೊಂದನ್ನು ಕೋರಿದ್ದರು. ಶುಕ್ರವಾರ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ‘‘ಈ ಪ್ರಕರಣದ ಬಾಕಿಯಿರುವ ವಿಚಾರಣೆಯನ್ನು ಹೈಕೋರ್ಟ್ನ ಬೇರೆ ಯಾವುದಾದರೂ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ನಾವು ಕಲ್ಕತ್ತಾ ಹೈಕೋರ್ಟ್ನ ಉಸ್ತುವಾರಿ ಮುಖ್ಯ ನ್ಯಾಯಾಧೀಶರಿಗೆ ನಿರ್ದೇಶನ ನೀಡುತ್ತೇವೆ’’ ಎಂದು ತನ್ನ ಆದೇಶದಲ್ಲಿ ಹೇಳಿತು. ತೃಣಮೂಲ ಕಾಂಗ್ರೆಸ್ ನಾಯಕ ಅಭಿಶೇಕ್ ಬ್ಯಾನರ್ಜಿ ಒಳಗೊಂಡಿರುವ ಈ ಪ್ರಕರಣದಲ್ಲಿ ನ್ಯಾ. ಗಂಗೋಪಾಧ್ಯಾಯ ಹಲವಾರು ಆದೇಶಗಳನ್ನು ನೀಡಿದ್ದರು. ಟಿವಿ ವಾಹಿನಿಯೊಂದಕ್ಕೆ ನ್ಯಾ. ಗಂಗೋಪಾಧ್ಯಾಯ ಸಂದರ್ಶನ ನೀಡಿದ ಬಳಿಕ, ಅವರ ವಿರುದ್ಧ ಅಭಿಶೇಕ್ ಬ್ಯಾನರ್ಜಿ ಸುಪ್ರೀಂ ಕೋರ್ಟ್ಗೆ ದೂರು ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ನಿರ್ದಿಷ್ಟ ವ್ಯಕ್ತಿ’ಯೊಬ್ಬರಿಗೆ ಪೂರಕವಾದ ಆದೇಶಗಳನ್ನು ನೀಡದ ನ್ಯಾಯಾಧೀಶರನ್ನು ಮಣಿಸುವ ನಿರ್ದಿಷ್ಟ ತಂತ್ರಗಳನ್ನು ರಾಜ್ಯದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಆರೋಪಿಸಿದರು. ‘‘ಇನ್ನೋರ್ವ ನ್ಯಾಯಾಧೀಶರ ಪ್ರಕರಣದಲ್ಲಿ, ಅವರ ನ್ಯಾಯಾಲಯ ಕೋಣೆಗೆ ತಡೆ ಒಡ್ಡಲಾಯಿತು. ಜನರು ಪೇಪರ್ವೇಟ್ಗಳು ಮತ್ತು ಚಪ್ಪಲಿಗಳೊಂದಿಗೆ ಬಂದರು. ನ್ಯಾಯಾಧೀಶರ ನಿವಾಸಗಳ ಸಮೀಪ ಮಾನಹಾನಿಕರ ಪೋಸ್ಟರ್ಗಳನ್ನು ಅಂಟಿಸಲಾಯಿತು. ನ್ಯಾಯಾಧೀಶರ ಮನೋಸ್ಥೈರ್ಯದ ಮೇಲೆ ಪರಿಣಾಮ ಬೀರದಂಥ ಮಾತುಗಳನ್ನು ದಯವಿಟ್ಟು ಆಡಿ’’ ಎಂದು ಮೆಹ್ತಾ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶ ಚಂದ್ರಚೂಡ್, ನ್ಯಾ. ಗಂಗೋಪಾಧ್ಯಾಯ ಟಿವಿ ಸಂದರ್ಶನದಲ್ಲಿ ನೀಡಿರುವ ಹೇಳಿಕೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯದ ವಿವೇಚನೆಯನ್ನು ಬಳಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

Similar News