ಆಯುರ್ವೇದ- ಅಲೋಪತಿ ಸಂಘರ್ಷ

Update: 2023-05-03 04:38 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಆಯುರ್ವೇದ ಮತ್ತು ಅಲೋಪತಿಯ ನಡುವೆ ಅನಾರೋಗ್ಯಕರ ಸಂಘರ್ಷ ಶುರುವಾಗಿದೆ. ಭಾರತದ ಪ್ರಾಚೀನ ಪರಂಪರೆಯನ್ನು ತನ್ನ ಹೆಗ್ಗಳಿಕೆಯನ್ನಾಗಿಸಿಕೊಂಡಿರುವ ಆಯುರ್ವೇದ ಸರಕಾರದ ಆರ್ಥಿಕ, ರಾಜಕೀಯ ಬೆಂಬಲದೊಂದಿಗೆ ಅಲೋಪತಿಯನ್ನು ದಾಟಿ ಮುನ್ನೆಲೆಗೆ ಬರಲು ಯತ್ನಿಸುತ್ತಿದೆ. 'ಪ್ಲಾಸ್ಟಿಕ್ ಸರ್ಜರಿ'ಯಿಂದ ಹಿಡಿದು ಎಲ್ಲ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳು ಪ್ರಾಚೀನ ಭಾರತದಲ್ಲಿತ್ತು ಎನ್ನುವುದನ್ನು ಪದೇ ಪದೇ ಹೇಳುತ್ತಾ, ಅವೈಜ್ಞಾನಿಕ ಮಾರ್ಗದ ಮೂಲಕ ಆಯುರ್ವೇದವನ್ನು ಜನರ ನಡುವೆ ತರಲು ಪ್ರಯತ್ನ ನಡೆಯುತ್ತಿದೆ. ಆಧುನಿಕ ದಿನಗಳಲ್ಲಿ ಜನಸಾಮಾನ್ಯರ ಅನಾರೋಗ್ಯಕ್ಕೆ ಎಷ್ಟು ಪರಿಣಾಮಕಾರಿಯಾಗಿ ಸ್ಪಂದಿಸಬಲ್ಲದು ಎನ್ನುವ ಮಾನದಂಡದಲ್ಲಿ ಆಯುರ್ವೇದಕ್ಕೆ ನೆರವನ್ನು ನೀಡುವ ಬದಲು, 'ಒಂದು ಕಾಲದ ಇತ್ತು'ಗಳ ರಮ್ಯ ಕಲ್ಪನೆಗಳ ಆಧಾರದಲ್ಲಿ ಸರಕಾರ ಅನುದಾನಗಳನ್ನು ಬಿಡುಗಡೆ ಮಾಡತೊಡಗಿತು. ಆಧುನಿಕ ವೈದ್ಯಕೀಯಕ್ಕೆ ಸರಕಾರ ನೀಡುತ್ತಿರುವ ಅನುದಾನದ ಒಂದು ಭಾಗ 'ಆಯುಷ್'ಗೆ ವರ್ಗಾವಣೆಗೊಂಡಿತು. ಆಯುರ್ವೇದದ ಹೆಸರಿನಲ್ಲಿ ವೈದ್ಯಕೀಯೇತರ ಶಕ್ತಿಗಳು ಹಣ ಮಾಡತೊಡಗಿದವು. ಇದೇ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ಕೂಡ ತಮ್ಮನ್ನು ತಾವು 'ಅಲೋಪತಿ ವೈದ್ಯ'ರಿಗೆ ಸರಿಸಮಾನರು ಎಂದೇ ಘೋಷಿಸಿಕೊಂಡು ಕಾರ್ಯನಿರ್ವಹಿಸತೊಡಗಿದರು. ಪರಿಣಾಮವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಆಯುರ್ವೇದ ವೈದ್ಯರು ಎಂಬಿಬಿಎಸ್ ಪದವಿಗಳನ್ನು ಹೊಂದಿರುವ ಅಲೋಪತಿ ವೈದ್ಯರಿಗೆ ಸರಿಸಮಾನವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದರು. ಗುಜರಾತ್ ಹೈಕೋರ್ಟ್ ಇದನ್ನು ಮಾನ್ಯ ಮಾಡಿತು ಮಾತ್ರವಲ್ಲ, ಅವರಿಗೆ ಸಮಾನ ವೇತನವನ್ನು ನೀಡಬೇಕು ಎಂದೂ ಆದೇಶಿಸಿತು. ಆದರೆ ಇದೀಗ ಸುಪ್ರೀಂಕೋರ್ಟ್ ಗುಜರಾತ್ ಹೈಕೋರ್ಟ್ ನ ಆದೇಶವನ್ನು ರದ್ದುಗೊಳಿಸಿದೆ. ಮಾತ್ರವಲ್ಲ, ಆಯುರ್ವೇದ ವೈದ್ಯರು ಅಲೋಪತಿ ವೈದ್ಯರಿಗೆ ಸರಿಸಮವಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಾಚೀನ ಪದ್ಧತಿಯಾದ ಆಯುರ್ವೇದ ವೈದ್ಯಕೀಯವನ್ನು ಗೌರವಿಸುತ್ತಲೇ, ಸಂಕೀರ್ಣ ಶಸ್ತ್ರ ಚಿಕಿತ್ಸೆಗಳನ್ನು ನಡೆಸುವ ಸರ್ಜನ್‌ಗಳಿಗೆ ಸಹಾಯಕರಾಗಿ ಕೆಲಸ ಮಾಡಲು ಆಯುರ್ವೇದ ವೈದ್ಯರಿಗೆ ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಅದು ಎತ್ತಿ ಹಿಡಿದಿದೆ. ''ಒಂದು ವೈದ್ಯಕೀಯ ವ್ಯವಸ್ಥೆಯು ಇನ್ನೊಂದಕ್ಕಿಂತ ಶ್ರೇಷ್ಠ ಎಂದು ನಾವು ಹೇಳುತ್ತಿದ್ದೇವೆ ಎಂಬುದಾಗಿ ತಪ್ಪು ತಿಳಿಯಬಾರದು. ಅದು ನಮ್ಮ ಕಾರ್ಯಸೂಚಿಯೂ ಅಲ್ಲ. ಪ್ರತಿಯೊಂದು ಪರ್ಯಾಯ ವೈದ್ಯಕೀಯ ವ್ಯವಸ್ಥೆಗೆ ಇತಿಹಾಸದಲ್ಲಿ ಅದರದ್ದೇ ಆದ ಸ್ಥಾನವಿದೆ ಎಂಬ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ, ಇಂದು ದೇಶೀ ವೈದ್ಯಕೀಯ ವ್ಯವಸ್ಥೆಯನ್ನು ಅನುಸರಿಸುತ್ತಿರುವ ವೈದ್ಯರು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡುವುದಿಲ್ಲ. ಆಯುರ್ವೇದ ಅಧ್ಯಯನ ಮಾಡಿದವರು ಇಂತಹ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದು ಸಾಧ್ಯವಿಲ್ಲ. ಅದೇ ರೀತಿ, ಮರಣೋತ್ತರ ಪರೀಕ್ಷೆ ಅಥವಾ ಶವ ಪರೀಕ್ಷೆಯನ್ನು ಆಯುರ್ವೇದ ವೈದ್ಯರು ಮಾಡುವುದಿಲ್ಲ'' ಎಂದೂ ಸುಪ್ರೀಂಕೋರ್ಟ್ ತನ್ನ ತೀರ್ಪಿನ ಸಂದರ್ಭದಲ್ಲಿ ಉಲ್ಲೇಖಿಸಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಅದರದೇ ಆದ ಪ್ರಾಚೀನ ಹಿರಿಮೆಯಿದೆ ಎನ್ನುವುದು ನಿಜವಾದರೂ ಆಧುನಿಕ ದಿನಗಳಲ್ಲಿ ಅದಕ್ಕೆ ಬಹಳಷ್ಟು ಮಿತಿಗಳಿರುವುದನ್ನು ಒಪ್ಪಿಕೊಳ್ಳಬೇಕು ಎಂದು ಸುಪ್ರೀಕೋರ್ಟ್ ಸ್ಪಷ್ಟಪಡಿಸಿದೆ.

ಹಾಗೆಂದು ಆಯುರ್ವೇದವನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ದೈನಂದಿನ ಸಾಮಾನ್ಯ ಕಾಯಿಲೆಗಳಿಗೆ ಕೇವಲ ಆಯುರ್ವೇದವನ್ನೇ ನೆಚ್ಚಿಕೊಂಡ ದೊಡ್ಡ ಸಂಖ್ಯೆಯ ಜನರು ಭಾರತದಲ್ಲಿದ್ದಾರೆ. ಆಧುನಿಕ ವೈದ್ಯ ಪದ್ಧತಿ ಸದಾ ಆಯುರ್ವೇದಕ್ಕೆ ಕೃತಜ್ಞವಾಗಿರಬೇಕು. ಯಾಕೆಂದರೆ ಇಂದಿನ ಎಲ್ಲ ಔಷಧಿಗಳೂ ಆಯುರ್ವೇದಗಳಿಂದಲೇ ಅಭಿವೃದ್ಧಿಗೊಂಡವುಗಳು. ಪ್ರಾಚೀನ ಔಷಧಿ ಪ್ರಕಾರಗಳು ಕಾಲಕ್ಕೆ ತಕ್ಕಂತೆ, ರೋಗಕ್ಕೆ ತಕ್ಕಂತೆ ಅಭಿವೃದ್ಧಿಗೊಳ್ಳುತ್ತಾ ಹೊಸ ಹೊಸ ಅನ್ವೇಷಣೆಗಳ ಜೊತೆಗೆ ಅಲೋಪತಿ ವೈದ್ಯಕೀಯ ಪದ್ಧತಿ ಬೆಳೆದು ನಿಂತಿದೆ. ಒಂದು ಕಾಲದಲ್ಲಿ ಎತ್ತಿನ ಬಂಡಿಯಿಂದಲೇ ಜನಸಾಮಾನ್ಯರ ಬದುಕು ನಡೆಯುತ್ತಿತ್ತು. ಅದೇ ಎತ್ತಿನ ಬಂಡಿ ಅಭಿವೃದ್ಧಿಗೊಂಡು ಇಂದು ಆ ಜಾಗದಲ್ಲಿ ಯಂತ್ರಗಳು ಆಕ್ರಮಿಸಿಕೊಂಡಿವೆ. ಅಂದು ಎತ್ತಿನಬಂಡಿ ನೀಡಿದ ಕೊಡುಗೆಯನ್ನು ನಾವೆಂದಿಗೂ ತಿರಸ್ಕರಿಸಲು ಸಾಧ್ಯವಿಲ್ಲ. ಹಾಗೆಯೇ ಇಂದು ಹೊಗೆ, ಪರಿಸರ ಮಾಲಿನ್ಯ ಇತ್ಯಾದಿಗಳ ನೆಪದಲ್ಲಿ ಮತ್ತೆ ಎತ್ತಿನಬಂಡಿಯನ್ನು ಆಶ್ರಯಿಸುವಂತೆಯೂ ಇಲ್ಲ. ಆಧುನಿಕ ವಾಹನಗಳ ಮುಂದೆ ಅವುಗಳನ್ನು ಸಮೀಕರಿಸಲು ಸಾಧ್ಯವಿಲ್ಲ. ಸದ್ಯದ ರಾಜಕೀಯವನ್ನು ಬಳಸಿಕೊಂಡು ಆಯುರ್ವೇದ ಪದ್ಧತಿಯ ಹೆಸರಿನಲ್ಲಿ ದೇಶದ ಆರೋಗ್ಯ ವ್ಯವಸ್ಥೆಯನ್ನು ದಾರಿ ತಪ್ಪಿಸುವುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕು. ಮುಖ್ಯವಾಗಿ ಪತಂಜಲಿಯಂತಹ ಕೆಲವು ಕಂಪೆನಿಗಳು ಭಾರತದ ಪ್ರಾಚೀನತೆಯನ್ನು ಮುಂದಿಟ್ಟುಕೊಂಡು ಆಯುರ್ವೇದ ಹೆಸರಿನಲ್ಲಿ ದೊಡ್ಡ ಮಟ್ಟದ ಸರಕಾರಿ ಸವಲತ್ತುಗಳನ್ನು ತನ್ನದಾಗಿಸಿಕೊಂಡಿದೆ. 'ಆಯುಷ್' ಮೂಲಕ ತಮ್ಮ ಕಂಪೆನಿಯ ಔಷಧಿಗಳನ್ನು ಮಾರುಕಟ್ಟೆಗೆ ಬಲವಂತವಾಗಿ ತುರುಕಿದೆ.

ಸರಕಾರವನ್ನು ಬಳಸಿಕೊಂಡು ಜನರ ಮೇಲೆ ಆಯುರ್ವೇದ ಔಷಧಿಗಳನ್ನು ಹೇರುತ್ತಿವೆ ಎನ್ನುವ ಆರೋಪಗಳು ಅವುಗಳ ಮೇಲಿವೆ. ಎಲ್ಲಕ್ಕಿಂತ ಆತಂಕದ ವಿಷಯವೆಂದರೆ, ದೇಶದ ಆರೋಗ್ಯ ವ್ಯವಸ್ಥೆಗಾಗಿ ಮೀಸಲಿರಿಸಿರುವ ಹಣದ ದೊಡ್ಡ ಪಾಲು 'ಆಯುಷ್'ಗೆ ವರ್ಗಾವಣೆಯಾಗುತ್ತಿರುವುದರಿಂದ, ಸರಕಾರಿ ಆಸ್ಪತ್ರೆಗಳು ಆಧುನಿಕ ಔಷಧಿಗಳ ಕೊರತೆಯಿಂದ ನರಳುತ್ತಿವೆ ಎನ್ನುವ ದೂರುಗಳಿವೆ. ಸರಕಾರಿ ಆಸ್ಪತ್ರೆಗಳಿಗೆ ಅಲೋಪತಿ ಔಷಧಿಗಾಗಿ ಭೇಟಿ ನೀಡಿದರೆ, ಅವರ ಮೇಲೆ ಆಯುಷ್ ಔಷಧಿಗಳನ್ನು ಹೇರಲಾಗುತ್ತಿದೆ ಎನ್ನುವ ಟೀಕೆಗಳೂ ಇವೆ. ಆಯುರ್ವೇದಕ್ಕೆ ಪ್ರೋತ್ಸಾಹ ನೀಡಬೇಕು ನಿಜ. ಆದರೆ ಸರಕಾರಿ ಆಸ್ಪತ್ರೆಗಳು ಅಲೋಪತಿ ಔಷಧಿಗಳಿಗೆ ಪರ್ಯಾಯವಾಗಿ ಆಯುಷ್ ಔಷಧಿಗಳನ್ನು ಬಳಸಿ ಜನಸಾಮಾನ್ಯರನ್ನು 'ಪ್ರಯೋಗ ಪಶು'ವಾಗಿಸಬಾರದು. ಆಯುಷ್ ಬಳಕೆ ಸಂಪೂರ್ಣ ಐಚ್ಛಿಕವಾಗಿರಬೇಕು. ಅದು ಜನಸಾಮಾನ್ಯರ ಸ್ವಯಂ ಆಯ್ಕೆಯಾಗಿರಬೇಕು. ಕ್ಯಾನ್ಸರ್, ಟಿಬಿ, ಎಚ್‌ಐವಿಯಂತಹ ಮಾರಕ ರೋಗಗಳಿಂದ ನರಳುವ ಕೋಟ್ಯಂತರ ಬಡ ಜನರು ಈ ದೇಶದಲ್ಲಿದ್ದಾರೆ. ಅವರನ್ನು ಚಿಕಿತ್ಸೆಯಿಂದ ಗುಣಪಡಿಸುವ ಔಷಧಿಗಳು ಆಯುರ್ವೇದದ ಬಳಿ ಇಲ್ಲ. ಅಲೋಪತಿ ಪದ್ಧತಿಗೆ ಮೀಸಲಿರಿಸಿದ ಹಣವನ್ನು ಆಯುಷ್‌ಗೆ ವರ್ಗಾಯಿಸಿದರೆ ಮೇಲಿನ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸರಕಾರಿ ಆಸ್ಪತ್ರೆಗಳಿಗೆ ಸಾಧ್ಯವಾಗುವುದು ಹೇಗೆ? ಇದೇ ಸಂದರ್ಭದಲ್ಲಿ ಕೊರೋನಾ ಕಾಲದಲ್ಲಿ ಆಯುರ್ವೇದದ ಹೆಸರಿನಲ್ಲಿ ಔಷಧಿಯನ್ನು ಹೊರ ತಂದು ಪತಂಜಲಿಯಂತಹ ಸಂಸ್ಥೆ ಜನರನ್ನು ಹೇಗೆ ವಂಚಿಸಿತು ಎನ್ನುವುದನ್ನು ನಾವು ಮರೆಯಬಾರದು.

ಅಲೋಪತಿಯಂತೆ ಸ್ಪಷ್ಟವಾದ ವೈಜ್ಞಾನಿಕ ಚೌಕಟ್ಟು ಆಯುರ್ವೇದಕ್ಕೆ ಇಲ್ಲದೇ ಇರುವುದರಿಂದ, ಕಂಡವರೆಲ್ಲ ವೈದ್ಯರಾಗಿ ಗುರುತಿಸುತ್ತಾರೆ. ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ 'ಗೋಮೂತ್ರ'ದ ಔಷಧಿಗಳನ್ನು ಸೂಚಿಸುವ 'ಪಂಡಿತರೂ' ಹೆಚ್ಚುತ್ತಿದ್ದಾರೆ. ಅಲೋಪತಿ ಚಿಕಿತ್ಸೆಯ ಜೊತೆಗೆ ಪೂರಕವಾಗಿ ಆಯುರ್ವೇದ ಕೆಲಸ ಮಾಡಬೇಕೇ ಹೊರತು, ತನ್ನನ್ನು ತಾನು ಅಲೋಪತಿಗೆ ಪರ್ಯಾಯ ಎಂದು ಬಿಂಬಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಮೂರ್ಖತನವಾಗುತ್ತದೆ. ಅದು ಈ ದೇಶದ ಆರೋಗ್ಯ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಬಹುದು. ಇದೇ ಸಂದರ್ಭದಲ್ಲಿ ಆಯುರ್ವೇದದಲ್ಲಿ ಸಂಶೋಧನೆಗಳು ನಡೆದು ಅದನ್ನು ಅಭಿವೃದ್ಧಿಗೊಳಿಸಿ ಅಲೋಪತಿಗೆ ಸಮಾನವಾಗಿ ನಿಲ್ಲಿಸಬೇಕೆ ಹೊರತು, ವೇತನದ ಮೂಲಕ ಅಲೋಪತಿ ವೈದ್ಯರಿಗೆ ಸರಿಸಮಾನವಾಗಲು ಮುಂದಾಗುವುದು ಆರೋಗ್ಯಕರ ಸ್ಪರ್ಧೆಯಲ್ಲ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ಗುಜರಾತ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿರುವುದು ಆರೋಗ್ಯ ಕ್ಷೇತ್ರದ ಅನಾರೋಗ್ಯ ಸ್ಪರ್ಧೆಯೊಂದಕ್ಕೆ ಸಣ್ಣದೊಂದು ಶಸ್ತ್ರ ಚಿಕಿತ್ಸೆಯನ್ನು ಮಾಡಿದಂತಾಗಿದೆ.

Similar News