ಶೇ 56.7 ರಷ್ಟು ಕೇಂದ್ರ ಸರ್ಕಾರಿ ಯೋಜನೆಗಳು ವಿಳಂಬ; ಶೇ 22ರಷ್ಟು ಏರಿಕೆಯಾದ ವೆಚ್ಚ
ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿಳಂಬಿತ ಕಾಮಗಾರಿಗಳ ಪ್ರಮಾಣ ಮಾರ್ಚ್ 2023 ರಲ್ಲಿ ಶೇ 56.7ಗೆ ಏರಿಕೆಯಾಗಿದ್ದು, ಇದು ಕಳೆದ 20 ವರ್ಷಗಳ ಅವಧಿಯಲ್ಲಿಯೇ ಗರಿಷ್ಠವಾಗಿದೆ ಎಂದು ಕೇಂದ್ರ ಅಂಕಿಅಂಶಗಳ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾಸಿಕ ವರದಿಯೊಂದರಿಂದ ತಿಳಿದು ಬಂದಿದೆ.
ಪ್ರಸ್ತುತ ರೂ. 150 ಕೋಟಿಗೂ ಅಧಿಕ ಮೊತ್ತದ ಕೇಂದ್ರ ಸರ್ಕಾರದ 1,449 ಕಾಮಗಾರಿಗಳು ನಡೆಯುತ್ತಿದ್ದು ಅವುಗಳಲ್ಲಿ ಹಲವು ಯೋಜನೆಗಳು ಸರಾಸರಿ ಮೂರು ವರ್ಷಗಳಿಗಳಿಗಿಂತ ಹೆಚ್ಚು ಸಮಯ ವಿಳಂಬಗೊಂಡಿವೆ.
ಇದರಿಂದಾಗಿ ಈ ಕಾಮಗಾರಿಗಳ ವೆಚ್ಚ ಅವುಗಳ ಮೂಲ ಅಂದಾಜು ವೆಚ್ಚಗಳಿಗಿಂತ ಶೇ. 22.02ರಷ್ಟು ಹೆಚ್ಚಾಗಲಿವೆ. ಅಂದರೆ ಇದರಿಂದಾಗಿ ಸರ್ಕಾರದ ಮೇಲೆ ರೂ. 4.6 ಟ್ರಿಲಿಯನ್ ಹೆಚ್ಚುವರಿ ಹೊರೆಬೀಳಲಿದೆ. ಈ ರೀತಿ ಯೋಜನೆಗಳು ವಿಳಂಬಗೊಂಡು ಸರಕಾರದ ಮೇಲೆ ಗರಿಷ್ಠ ಹೆಚ್ಚುವರಿ ಹೊರೆ 2004ರಲ್ಲಿ ಎನ್‌ಡಿಎ ಸರ್ಕಾರ ಆಡಳಿತದಲ್ಲಿದ್ದಾಗ ಬಿದ್ದಿತ್ತು.
ವಿಳಂಬಗೊಂಡ ಯೋಜನೆಗಳಲ್ಲಿ ಗರಿಷ್ಠ ಕಾಮಗಾರಿಗಳು ಭಾರತೀಯ ರೈಲ್ವೆಗೆ ಸಂಬಂಧಿಸಿದ್ದಾಗಿದ್ದರೆ ನಂತರದ ಸ್ಥಾನ ವಿದ್ಯುತ್ ಕಾಮಗಾರಿಗಳು ಹಾಗೂ ಜಲಸಂಪನ್ಮೂಲ ಯೋಜನೆಗಳದ್ದಾಗಿದೆ.