×
Ad

24 ಭಾರತೀಯ ಸಿಬ್ಬಂದಿಯಿದ್ದ ತೈಲ ಹಡಗು ವಶಪಡಿಸಿಕೊಂಡ ಇರಾನ್‌ ನೌಕಾಪಡೆ: ವರದಿ

Update: 2023-04-29 18:19 IST

ಹೊಸದಿಲ್ಲಿ: ಇಪ್ಪತ್ನಾಲ್ಕು ಮಂದಿ ಭಾರತೀಯ ಸಿಬ್ಬಂದಿಗಳಿದ್ದ ಹಾಗೂ ಅಮೆರಿಕಾಗೆ ತೆರಳುತ್ತಿದ್ದ ತೈಲ ಟ್ಯಾಂಕರ್‌ ಒಂದನ್ನು ಇರಾನ್‌ನ ನೌಕಾ ಪಡೆ ಒಮನ್‌ ತೀರದಲ್ಲಿ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಟರ್ಕಿಯ ಸಂಸ್ಥೆ ಅಡ್ವಾಂಟೇಜ್‌ ಟ್ಯಾಂಕರ್ಸ್‌  ಈ ತೈಲ ಟ್ಯಾಂಕರ್‌ ನಿರ್ವಾಹಕನಾಗಿದ್ದು ತೈಲ ಟ್ಯಾಂಕರ್‌ನ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆಯಾದರೂ ಅವರು ಅಪಾಯದಲ್ಲಿಲ್ಲ. ಅವರ ಹಾಗೂ ಹಡಗಿನ ಬಿಡುಗಡೆಗೆ ಸಂಬಂಧಿತ ಪ್ರಾಧಿಕಾರಗಳೊಂದಿಗೆ ಸಂಸ್ಥೆ ಸಂಪರ್ಕದಲ್ಲಿದೆ ಎಂದು ಟರ್ಕಿಯ ಸಂಸ್ಥೆ ಹೇಳಿದೆ.

ಅಂತಾರಾಷ್ಟ್ರೀಯ ವಿವಾದವೊಂದರ ಹಿನ್ನೆಲೆಯಲ್ಲಿ ಇರಾನ್‌ನ ನೌಕಾಪಡೆ ಈ ಹಡಗನ್ನು ಒಂದು ಬಂದರಿಗೆ ತೆಗೆದುಕೊಂಡು ಹೋಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ತೈಲ ಹಡಗು ಇರಾನ್‌ ನೌಕಾಪಡೆಗೆ ಸೇರಿದ ಹಡಗೊಂದಕ್ಕೆ ಢಿಕ್ಕಿ ಹೊಡೆದ ನಂತರ ಇಬ್ಬರು ನಾಪತ್ತೆಯಾಗಿ ಹಲವರು ಗಾಯಗೊಂಡಿದ್ದರೆನ್ನಲಾಗಿದ್ದು ಈ ಘಟನೆಯ ನಂತರ ತೈಲ ಹಡಗನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಹಡಗನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಅಮೆರಿಕಾದ ನೌಕಾಪಡೆ ಆಗ್ರಹಿಸಿದೆ. ಇರಾನ್‌ ದೇಶದ ಕ್ರಮವು ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿದೆ ಎಂದೂ ಅಮೆರಿಕಾ ಹೇಳಿದೆ.

ಅಡ್ವಾಂಟೇಜ್‌ ಸ್ವೀಟ್‌ ಎಂಬ ಹೆಸರಿನ ಈ ಹಡಗು ಟೆಕ್ಸಾಸ್‌ನ ಹೌಸ್ಟನ್‌ನತ್ತ ಸಾಗುತ್ತಿತ್ತು.

ಕಳೆದೆರಡು ವರ್ಷಗಳಲ್ಲಿ ಇರಾನ್‌ ವಶಪಡಿಸಿಕೊಂಡ ಐದನೇ ವಾಣಿಜ್ಯ ಹಡಗು ಇದಾಗಿದೆ ಎಂದು ತಿಳಿದು ಬಂದಿದೆ.

ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಇರಾನ್‌ನ ರಿವೊಲ್ಯೂಶನರಿ ಗಾರ್ಡ್‌ ಕಾರ್ಪ್ಸ್‌ ಮೇಲೆ ಎಪ್ರಿಲ್‌ 24 ರಂದು ಅಮೆರಿಕಾ, ಇಂಗ್ಲೆಂಡ್‌ ಮತ್ತು ಯುರೋಪಿಯನ್‌ ಯೂನಿಯನ್‌ ಕಠಿಣ ನಿರ್ಬಂಧಗಳನ್ನು ಹೇರಿದ ನಂತರದ ಬೆಳವಣಿಗೆ ಇದಾಗಿದೆ.

Similar News