‘ಅಶೋಕ್ ಗೆಹ್ಲೋಟ್ ರಾವಣ’ ಎಂದ ಕೇಂದ್ರ ಸಚಿವರ ವಿರುದ್ಧ ಪ್ರಕರಣ ದಾಖಲು

Update: 2023-04-30 02:09 GMT

ಜೈಪುರ: ರಾಜಸ್ಥಾನ ಮುಖ್ಯಮಂರಿ ಅಶೋಕ್ ಗೆಹ್ಲೋಟ್ ಅವರನ್ನು ರಾವಣ ಎಂದು ಕರೆದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗುರುವಾರ ಚಿತ್ತೋರ್‌ಗಢದಲ್ಲಿ ಬಿಜೆಪಿ ಆಯೋಜಿಸಿದ್ದ ಮಹಾಕ್ರೋಶ ಸಭಾ ಕಾರ್ಯಕ್ರಮದಲ್ಲಿ ಗೆಹ್ಲೋಟ್ ಅವರನ್ನು "ರಾಜಕೀಯದ ರಾವಣ" ಎಂದು ಕರೆದಿದ್ದರು. ಜನತೆ ಮುಂಬರುವ ಅವರ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದ್ದರು.

"ರಾಜಸ್ಥಾನ ರಾಜಕೀಯದ ರಾವಣ ಎನಿಸಿದ ಅಶೋಕ್ ಗೆಹ್ಲೋಟ್ ಅವರ ಆಡಳಿತವನ್ನು ಕೊನೆಗೊಳಿಸಲು ನೀವು ಬಯಸಿದ್ದರೆ ಕೈ ಎತ್ತಿ ಹಾಗೂ ರಾಮರಾಜ್ಯ ನಿರ್ಮಾಣಕ್ಕೆ ನಿರ್ಣಯ ಕೈಗೊಳ್ಳಿ" ಎಂದು ಸೂಚಿಸಿದ್ದರು.

ಗೆಹ್ಲೋಟ್ ಹಾಗೂ ಶೇಖಾವತ್ ನಡುವೆ ಸಂಜೀವಿನಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಹಗರಣದಲ್ಲಿ ಹಣಾಹಣಿ ನಡೆಯುತ್ತಿದೆ. ಶೇಖಾವತ್ ಈ ಹಗರಣದಲ್ಲಿ ಷಾಮೀಲಾಗಿದ್ದಾರೆ ಎಂದು ಗೆಹ್ಲೋಟ್ ಬಹಿರಂಗ ಹೇಳಿಕೆ ನೀಡಿದ್ದರು. ರಾಜಸ್ಥಾನ ಪೊಲೀಸರು ತನಿಖೆ ನಡೆಸುತ್ತಿರುವ ಹಗರಣದಲ್ಲಿ ತಮ್ಮ ಹೆಸರನ್ನು ಎಳೆದು ತಂದ ಕಾರಣಕ್ಕೆ ಶೇಖಾವತ್ ಅವರು ದೆಹಲಿ ನ್ಯಾಯಾಲಯದಲ್ಲಿ ಗೆಹ್ಲೋಟ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.

ಸ್ಥಳೀಯ ಕಾಂಗ್ರೆಸ್ ಮುಖಂಡ ಸುರೇಂದ್ರ ಸಿಂಗ್ ಜಾದಾವತ್, ಶೇಖಾವತ್ ವಿರುದ್ಧ ಚಿತ್ತೋರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶೇಖಾವತ್ ಬಂಧನಕ್ಕೆ ತಡೆ ನೀಡಿ ರಾಜಸ್ಥಾನ ಹೈಕೋರ್ಟ್‌ನ ಜೋಧಪುರ ಪೀಠ ಇತ್ತೀಚೆಗೆ ತೀರ್ಪು ನೀಡಿತ್ತು.

Similar News