ಎಲ್‌ಎಸ್‌ಜಿ- ಆರ್‌ಸಿಬಿ ಪಂದ್ಯದ ಬಳಿಕ ಕೊಹ್ಲಿ, ಗಂಭೀರ್ ನಡುವೆ ಮಾತಿನ ಚಕಮಕಿ !

Update: 2023-05-02 04:16 GMT

ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವೆ ಸೋಮವಾರ ನಡೆದ ಪಂದ್ಯ ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಎಲ್‌ಎಸ್‌ಜಿ ಮೆಂಟರ್ ಗೌತಮ್ ಗಂಭೀರ್ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಆರ್‌ಸಿಬಿ ಸವಾಲನ್ನು ಬೆನ್ನಟ್ಟುವ ನಿಟ್ಟಿನಲ್ಲಿ ಒಬ್ಬೊಬ್ಬ ಎಲ್‌ಎಸ್‌ಜಿ ಬ್ಯಾಟ್ಸ್‌ಮನ್ ಔಟಾಗುತ್ತಿದ್ದಂತೆ ಕೊಹ್ಲಿ ಉತ್ಸಾಹದಿಂದ ಕುಣಿದಾಡುತ್ತಿದ್ದುದು ಪಂದ್ಯದುದ್ದಕ್ಕೂ ಕಂಡುಬಂತು. 

2023ರ ಐಪಿಎಲ್‌ನಲ್ಲಿ ಉಭಯ ತಂಡಗಳ ನಡುವೆ ಇತ್ತೀಚೆಗೆ ಬೆಂಗಳೂರಿನಲ್ಲಿ ಪಡೆದ ಪಂದ್ಯದ ವೇಳೆ ಗಂಭೀರ್, ಆರ್‌ಸಿಬಿ ಬೆಂಬಲಿಗರಗೆ ’ಶಟಪ್’ ಎಂಬ ರೀತಿಯ ಸಂಜ್ಞೆ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಕೊಹ್ಲಿ ಈ ರೀತಿ ವರ್ತಿಸುತ್ತಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿದರು. ಈ ಹಂತದಲ್ಲಿ ಎಲ್‌ಎಸ್‌ಜಿ ಆರಂಭಿಕ ಆಟಗಾರ ಕೈಲ್ ಮೇಯರ್ಸ್‌ ಕೊಹ್ಲಿ ಬಳಿಗೆ ತೆರಳಿ ಆರ್‌ಸಿಬಿ ಸ್ಟಾರ್‌ಗೆ ಏನೋ ಹೇಳಿದ್ದು ಕಂಡುಬಂತು.

ಆಗ ಗಂಭೀರ ಮಧ್ಯಪ್ರವೇಶಿಸಿ ಮೇಯರ್ ಅವರನ್ನು ಆಚೆಗೆ ಕರೆದೊಯ್ದರು. ಈ ಘಟನೆ ನಡೆದ ಸ್ವಲ್ಪ ಸಮಯದ ಬಳಿಕ ಗಂಭೀರ್ ಲವಲವಿಕೆಯಿಂದ ಕೊಹ್ಲಿಗೆ ಏನೋ ಹೇಳುವ ದೃಶ್ಯಾವಳಿ ಕಾಣಿಸಿಕೊಂಡಿದೆ. ಇದು ಇಬ್ಬರ ನಡುವಿನ ಮುನಿಸಿಗೆ ಕಾರಣವಾಗಿರುವ ಸಾಧ್ಯತೆ ಇದೆ. ಆಗ ಇತರ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಬೆಂಬಲ ಸಿಬ್ಬಂದಿ ಇಬ್ಬರನ್ನೂ ಬೇರ್ಪಡಿಸಿದರು. ಬಳಿಕ ಕೊಹ್ಲಿ, ಎಲ್‌ಎಸ್‌ಜಿ ನಾಯಕ ರಾಹುಲ್ ಜತೆ ಸುಧೀರ್ಘ ಮಾತುಕತೆ ನಡೆಸಿದರು.

ಈ ಪಂದ್ಯದಲ್ಲಿ ಆರ್‌ಸಿಬಿ, ಎಲ್‌ಎಸ್‌ಜಿ ತಂಡವನ್ನು 18 ರನ್‌ಗಳಿಂದ ಸೋಲಿಸಿತ್ತು. 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದ ಆರ್‌ಸಿಬಿ ಸವಾಲನ್ನು ಬೆನ್ನಟ್ಟಿದ ಎಲ್‌ಎಸ್‌ಜಿ 19.5 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟ್ ಆಯಿತು.

Similar News