ಮೋದಿಜೀ.. ನಮ್ಮ ಕುಟುಂಬದ ಬಗ್ಗೆ ಬಿಜೆಪಿ ನಿಂದಿಸಿದಾಗ ನೀವು ಮೌನವಾಗಿದ್ದೇಕೆ?: ಉದ್ಧವ್ ಪ್ರಶ್ನೆ

Update: 2023-05-02 04:36 GMT

ಮುಂಬೈ: ’ಕಾಂಗ್ರೆಸ್ ಪಕ್ಷ 91 ಬಾರಿ ನನ್ನನ್ನು ನಿಂದಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಆಪಾದಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, "ಬಿಜೆಪಿ ಮುಖಂಡರು ನನ್ನ ಹಾಗೂ ಕುಟುಂಬವನ್ನು ಪದೇ ಪದೇ ನಿಂದಿಸಿದ ಸಂದರ್ಭದಲ್ಲಿ ನೀವು ಮೌನವಾಗಿ ಇದ್ದುದೇಕೆ?" ಎಂದು ಪ್ರಶ್ನಿಸಿದ್ದಾರೆ.

"ಪ್ರಧಾನಿ ಹಾಗೂ ಅವರ ತಂಡಕ್ಕೆ ನಿಂದನೆಯನ್ನು ಲೆಕ್ಕ ಹಾಕಲು ಸಮಯ ಇದೆ. ಆದರೆ ಅವರ ಪಕ್ಷದ ಮುಖಂಡರು ನನ್ನನ್ನು ಹಾಗೂ ಆದಿತ್ಯನನ್ನು ಪ್ರತಿದಿನ ನಿಂದಿಸುತ್ತಿದ್ದರು. ನಿಂದನಾತ್ಮಕ ಭಾಷೆ ಬಳಸುತ್ತಿದ್ದರು. ಅವರನ್ನು ಪ್ರಧಾನಿ ಏಕೆ ತಡೆದಿಲ್ಲ? ನಾವೂ ಅವರಿಗೆ ಅದೇ ಭಾಷೆಯಲ್ಲಿ ಉತ್ತರಿಸುತ್ತೇವೆ" ಎಂದು ಮುಂಬೈನಲ್ಲಿ ಸೋಮವಾರ ನಡೆದ ಎಂವಿಎ ರ್ಯಾಲಿಯಲ್ಲಿ ಸ್ಪಷ್ಟಪಡಿಸಿದರು.

"ನಿಂದಿಸುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ" ಎಂದು ವಾಗ್ದಾಳಿ ನಡೆಸಿದ ಅವರು, "ಇಂಥ ಸಂತತಿಯನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂದು ಆರ್‌ಎಸ್‌ಎಸ್ ಅನ್ನು ಪ್ರಶ್ನಿಸುತ್ತಿದ್ದೇನೆ" ಎಂದು ಹೇಳಿದರು.

"ಹಿಂದುತ್ವವನ್ನು ಬಲಿಕೊಟ್ಟು ಕಾಂಗ್ರೆಸ್ ಹಾಗೂ ಎನ್‌ಸಿಪಿ ಜತೆ ನಾನು ಕೈಜೋಡಿಸಿದ್ದಾಗಿ ಬಿಜೆಪಿ ಆಪಾದಿಸಿತ್ತು. ಹಾಗಾದರೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮಸೀದಿಗೆ ಭೇಟಿ ನೀಡಿದ್ದಕ್ಕೆ ಏನು ಹೇಳುತ್ತೀರಿ" ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

Similar News