×
Ad

ಲಂಚ ಆರೋಪ: ಎನ್‌ಐಎ ಎಸ್ಪಿ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

Update: 2023-05-02 10:26 IST

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎಸ್ಪಿ ವಿಶಾಲ್ ಗರ್ಗ್ ಮತ್ತು ಒಬ್ಬ ಇನ್‌ಸ್ಪೆಕ್ಟರ್ ವಿರುದ್ಧದ ವಸೂಲಿ ಮತ್ತು ಅಪರಾಧ ಪಿತೂರಿ ಆರೋಪದ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಉಗ್ರಗಾಮಿಗಳಿಗೆ ನೆರವು ನೀಡುವ ಆರೋಪದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿ ಮಣಿಪುರದ ವ್ಯಕ್ತಿಯೊಬ್ಬರಿಂದ 60 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಎನ್‌ಐಎ ನೀಡಿದ ದೂರಿನ ಆಧಾರದಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ. ಈ ಇಬ್ಬರು ಅಧಿಕಾರಿಗಳು ಮೌಖಿಕ/ ಅನೌಪಚಾರಿಕ ನೋಟಿಸ್‌ಗಳನ್ನು ನೀಡಿ ವ್ಯಕ್ತಿಗಳನ್ನು ಪ್ರಶ್ನಿಸಲು ಕರೆಸುತ್ತಿದ್ದರು ಹಾಗೂ ಅವರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.

ಈಗಾಗಲೇ ಎನ್‌ಐಎ ಇಂಫಾಲ್ ಶಾಖಾ ಕಚೇರಿಯ ಎಸ್ಪಿ ಗರ್ಗ್ ಹಾಗೂ ಇನ್‌ಸ್ಪೆಕ್ಟರ್ ರಜೀಬ್ ಖಾನ್ ಅವರನ್ನು ಅಮಾನತು ಮಾಡಲಾಗಿದೆ. ಇಬ್ಬರು ಅಧಿಕಾರಿಗಳು ಮಣಿಪುರದಲ್ಲಿ ಈ ದಂಧೆ ಮೂಲಕ ಜನರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸುತ್ತಿದ್ದರು ಎಂದು ಆಪಾದಿಸಲಾಗಿತ್ತು. ಈ ಬಗ್ಗೆ ವಿವರವಾದ ಆಂತರಿಕ ತನಿಖೆ ನಡೆಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ತನಿಖೆಯಿಂದ ತಿಳಿದು ಬಂದಂತೆ 2022ರ ಮಾರ್ಚ್ 9ರಂದು ಎನ್‌ಐಎ, ಉಗ್ರ ಸಂಘಟನೆಯ ಕಾರ್ಯಕರ್ತರ ವಿರುದ್ಧ ಹಣ ಸಂಗ್ರಹ ಪ್ರಕರಣ ದಾಖಲಿಸಿತ್ತು. ಎಸ್ಪಿ ಗರ್ಗ್ ಈ ಪ್ರಕರಣದಲ್ಲಿ ಮೊದಲ ಮೇಲ್ವಿಚಾರಣಾ ಅಧಿಕಾರಿಯಾಗಿದ್ದರು. ಗರ್ಗ್ ಅವರ ನಿರ್ದೇಶನದಂತೆ ಖಾನ್ ಈ ತನಿಖೆಗೆ ಸಹಕರಿಸುತ್ತಿದ್ದರು. ಇವರು ಕೆಲ ಉದ್ಯಮಿಗಳು ಹಾಗೂ ವೃತ್ತಿಪರರನ್ನು ವಿಚಾರಣೆಗಾಗಿ ಕರೆಸಿಕೊಂಡು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಬಳಿಕ ದೊಡ್ಡ ಮೊತ್ತದ ಹಣ ನೀಡಿದಲ್ಲಿ, ಪ್ರಕರಣದಿಂದ ಬಚಾವ್ ಮಾಡುವುದಾಗಿ ಆಮಿಷ ಒಡ್ಡುತ್ತಿದ್ದರು ಎಂದು ಎಫ್‌ಐಆರ್ ವಿವರಿಸಿದೆ.

Similar News