×
Ad

ತಿಹಾರ್‌ ಜೈಲ್‌ನಲ್ಲಿ ದಿಲ್ಲಿ ಶೂಟೌಟ್‌ ಪ್ರಕರಣದ ಆರೋಪಿಯ ಹತ್ಯೆ

Update: 2023-05-02 13:22 IST

ಹೊಸದಿಲ್ಲಿ: ರಾಜಧಾನಿಯ ತಿಹಾರ್‌ ಜೈಲಿನಲ್ಲಿ ಇಂದು ಬೆಳಿಗ್ಗೆ ವಿರೋಧಿ ಗ್ಯಾಂಗ್‌ ಸದಸ್ಯರ ದಾಳಿಗೆ ಕುಖ್ಯಾತ ಗ್ಯಾಂಗ್‌ಸ್ಟರ್‌ ಟಿಲ್ಲು ತಜಪುರಿಯಾ ಹತನಾಗಿದ್ದಾನೆ.

ಟಿಲ್ಲು ತಜಪುರಿಯಾ ಅಲಿಯಾಸ್ ಸುನೀಲ್‌ ಮನ್ನ್‌ ಮೇಲೆ ಕಬ್ಬಿಣದ ರಾಡುಗಳಿಂದ  ವೈರಿ ಗ್ಯಾಂಗ್‌ನ ಯೋಗೀಶ್‌ ತುಂಡ ಮತ್ತಾನ ಸಹವರ್ತಿಗಳು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ಆತನನ್ನು ತಕ್ಷಣ ದೀನ್‌ ದಯಾಳ್‌ ಉಪಾಧ್ಯಾಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು. ದಾಳಿಯಲ್ಲಿ ಗಾಯಗೊಂಡ ಇನ್ನೊಬ್ಬ ಕೈದಿ ರೋಹಿತ್‌ನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಯೋಗೇಶ್‌ ತುಂಡ, ದೀಪಕ್‌ ಟೀಟರ್‌, ರಿಯಾಝ್ ಖಾನ್‌ ಮತ್ತು ರಾಜೇಶ್‌ ಕಾರಾಗೃಹದ ಮೊದಲ ಅಂತಸ್ತಿನಲ್ಲಿರುವ ತಮ್ಮ ವಾರ್ಡಿನ ಕಬ್ಬಿಣದ ಗ್ರಿಲ್‌ಗಳನ್ನು ಮುರಿದು ಹೊರಬಂದು ತಳಅಂತಸ್ತಿನಲ್ಲಿ ತನ್ನ ಇತರ ಗ್ಯಾಂಗ್‌ ಸದಸ್ಯರೊಂದಿಗೆ ಇರಿಸಲಾಗಿದ್ದ ಟಿಲ್ಲು ಮೇಲೆ  ದಾಳಿ ನಡೆಸಿದ್ದರು.

ಮೇಲಿನ ಅಂತಸ್ತಿನಿಂದ ಕೆಳ ಅಂತಸ್ತಿಗೆ ಬರಲು ಅವರು ಬೆಡ್‌ಶೀಟ್‌ಗಳನ್ನು ಬಳಸಿದ್ದರು.

ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಹತನಾದ 2021 ರೋಹಿಣಿ ಕೋರ್ಟ್‌ ಶೂಟೌಟ್‌ ಪ್ರಕರಣದಲ್ಲಿ ಮುಖ್ಯ ಸಂಚುಕೋರ ಎಂದು ಟಿಲ್ಲು ಗುರುತಿಸಲ್ಪಟ್ಟಿದ್ದ. ಆತನ ಇಬ್ಬರು ಸಹಚರರು ವಕೀಲರ ವೇಷದಲ್ಲಿ ಬಂದು ಗೋಗಿಯನ್ನು ಸೆಪ್ಟೆಂಬರ್‌ 24, 2021ರಂದು ಹತ್ಯೆಗೈದಿದ್ದರೆ ಪೊಲೀಸರು ಪ್ರತಿದಾಳಿ ನಡೆಸಿ ಹಂತಕರನ್ನು ಕೊಂದಿದ್ದರು.

ಟಿಲ್ಲು ತಜಪುರಿಯಾ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.

ಕಳೆದ ತಿಂಗಳು ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಸಮೀಪವರ್ತಿ ಪ್ರಿನ್ಸ್‌ ಟೆವತೀಯಾ ಎಂಬಾತನನ್ನು ವೈರಿ ಗ್ಯಾಂಗ್‌ ಸದಸ್ಯರು ತಿಹಾರ್‌ ಜೈಲಿನಲ್ಲಿ ಸಾಯಿಸಿದ್ದರು.

Similar News