'ಮತಾಂತರಗೊಂಡ' ಯುವತಿಯರ ಸಂಖ್ಯೆಯನ್ನು 32 ಸಾವಿರದಿಂದ 3 ಕ್ಕೆ ಬದಲಿಸಿದ 'ದಿ ಕೇರಳ ಸ್ಟೋರಿ' ಚಿತ್ರತಂಡ!

Update: 2023-05-02 10:37 GMT

ಮುಂಬೈ: ಸುಳ್ಳು ಪ್ರತಿಪಾದನೆ ಮೂಲಕ ಸಮಾಜದಲ್ಲಿ ಅಪನಂಬಿಕೆ ಬಿತ್ತಲು ಹೊರಟಿದೆ ಎಂಬ ಆರೋಪ ಹೊತ್ತಿರುವ 'ದಿ ಕೇರಳ ಸ್ಟೋರಿ' ಚಿತ್ರ ತಂಡವು ವಿವಾದದ ಬಳಿಕ ತನ್ನ ಪ್ರತಿಪಾದನೆಯಲ್ಲಿ ಬದಲಾವಣೆ ತಂದಿದೆ. 

32,000 ಯುವತಿಯರು ಮತಾಂತರಗೊಂಡು ಐಎಸ್ ಸೇರಿದ್ದಾರೆ ಎಂದು ಪ್ರತಿಪಾದಿಸಿದ್ದ ಚಿತ್ರತಂಡವು ಟ್ರೇಲರ್‌ನ YouTube ಡಿಸ್ಕ್ರಿಪ್ಷನ್‌ ನಲ್ಲಿ ಬದಲಾವಣೆ ಮಾಡಿದ್ದು, 32 ಸಾವಿರ ಯುವತಿಯರ ಬದಲು 3 ಯುವತಿಯರು ಮತಾಂತರವಾಗಿ ಐಎಸ್‌ ಸೇರಿದ್ದಾರೆ ಎಂದು ಬದಲಾಯಿಸಲಾಗಿದೆ.  

'ಕೇರಳ ಸ್ಟೋರಿ' ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ದ್ವೇಷ ಭಾಷಣದ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ನ್ಯಾಯಾಲಯದಲ್ಲಿ ಪ್ರಕರಣವು ಪರಿಗಣನೆಗೆ ಬಂದಿತು. ಆದರೆ ಈ ಪ್ರಕರಣವನ್ನು ದ್ವೇಷ ಭಾಷಣದ ಜೊತೆಗೆ ವಿಚಾರಣೆ ನಡೆಸುವಂತಿಲ್ಲ ಎಂದು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ. ಅಗತ್ಯಬಿದ್ದರೆ ಸೆನ್ಸಾರ್ ಮಂಡಳಿ ಅನುಮತಿ ನೀಡಿರುವುದರ ವಿರುದ್ಧ ಹೈಕೋರ್ಟ್ ಮೊರೆ ಹೋಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಸೋಮವಾರ ಕೇಂದ್ರ ಸೆನ್ಸಾರ್ ಮಂಡಳಿಯು ಚಿತ್ರದ ಬಿಡುಗಡೆಗೆ ಅನುಮತಿ ನೀಡಿದ್ದು, ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಅವರ ಸಂದರ್ಶನವನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಅಲ್ಲದೆ, ಒಟ್ಟು ಹತ್ತು ಬದಲಾವಣೆ ಮಾಡುವಂತೆ ಸೆನ್ಸಾರ್‌ ಮಂಡಳಿ ಚಿತ್ರತಂಡಕ್ಕೆ A ಸರ್ಟಿಫಿಕೇಟ್‌ ನೀಡಿದೆ. 

ಚಿತ್ರದಲ್ಲಿನ ಆರೋಪಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ತೋರಿಸಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಯೂತ್ ಲೀಗ್ ಘೋಷಿಸಿತ್ತು. ಚಿತ್ರವು ಕೋಮುಗಲಭೆ ಸೃಷ್ಟಿಸುವ ಸಂಘ-ಪರಿವಾರದ ಅಜೆಂಡಾ ಎಂದು ಸಿಪಿಐಎಂ ಕೂಡಾ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿತ್ತು. ಧ್ವೇಷ ಹರಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಚಿತ್ರತಂಡದ ವಿರುದ್ಧ ಕಿಡಿ ಕಾರಿದ್ದರು.

Similar News