ಬಡವರಿಗೆ ಮನೆ ಕೊಡದೆ ವಂಚಿಸಿದ ಬಿಜೆಪಿ ಸರಕಾರ: ಅಶೋಕ್ ರೈ
ಪೆರುವಾಯಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ
ವಿಟ್ಲ: ಬಸವ ವಸತಿ ಸೇರಿದಂತೆ ವಿವಿಧ ಯೋಜನೆಯಡಿ ಗ್ರಾಪಂ ಮೂಲಕ ಗ್ರಾಮಸ್ಥರಿಗೆ ನೀಡುತ್ತಿದ್ದ ಮನೆಯನ್ನು ರಾಜ್ಯ ಬಿಜೆಪಿ ಸರಕಾರ ಬಡವನಿಗೆ ನೀಡದೆ ವಂಚಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಆರೋಪಿಸಿದ್ದಾರೆ.
ಅವರು ಪೆರುವಾಯಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಬರುವುದಾದರೆ ಸ್ವಾಗತವಿದೆ. ಭಯ ಪಡಬೇಡಿ ನಿಮ್ಮ ಶಾಸಕರಿರುವಾಗಲೇ ನಿಮ್ಮ ಕೆಲಸ ಆಗಲಿಲ್ಲ, ಅಕ್ರಮ ಸಕ್ರಮ ಫೈಲ್ ಮಾಡಿಕೊಡಲಿಲ. ನಾನು ಶಾಸಕನಾದರೆ ಪಕ್ಷ ಭೇದವಿಲದೆ ಎಲ್ಲರಿಗೂ ನೆರವು ನೀಡುತ್ತೇನೆ. ಅಶೋಕ್ ರೈ ಎಂದಿಗೂ ಮೋಸ ಮಾಡುವುದಿಲ್ಲ. ಕೊಟ್ಟ ಮಾತನ್ನು ತಪ್ಪಲಾರೆ ಎಂದು ಹೇಳಿದರು.
ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅಶೋಕ್ ರೈ ಗೆದ್ದರೆ ಅವರೊಟ್ಟಿಗೆ ಹೋಗಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಗೆದ್ದರೆ ಕಾಂಗ್ರೆಸ್ ನಲ್ಲೇ ಇರುವೆ ಎಲ್ಲರ ಸೇವೆ ಮಾಡುವೆ. ದುಷ್ಡ ಬುದ್ದಿ ನನಗಿಲ್ಲ. ನನ್ನ ತಂದೆ ಶಾಲೆ ಮೇಸ್ಟ್ರು ಆಗಿದ್ದರು. ಮೇಸ್ಡ್ರ ಮಗ ಯಾರ ಮನಸ್ಸಿಗೂ ನೋವು ಕೊಟ್ಟಿಲ್ಲ, ಕೊಡುವುದೂ ಇಲ್ಲ ಎಂದು ಹೇಳಿದರು.
ಪುಣಚದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ:
ಪುಣಚದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸತ್ಯ,ನ್ಯಾಯಕ್ಕೆ ಎಂದೆಂದೂ ಸಾವಿಲ್ಲ, ಯಾರೇ ಆಗಲಿ ಅನ್ಯಾಯ ಮಾಡಿದರೆ ಅದರ ಶಾಪ ತಟ್ಟಿಯೇ ತಟ್ಟುತ್ತದೆ ಎಂಬುದಕ್ಕೆ ಪುತ್ತೂರಿನ ಬಿಜೆಪಿಯೇ ಸಾಕ್ಷಿಯಾಗಿದೆ, ಪುತ್ತೂರು ಬಿಜೆಪಿಗೆ ಬಡವನ ಶಾಪ ತಟ್ಟಿದೆ ಎಂದು ಹೇಳಿದರು.
ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಮೇಲೆ ನಡೆದ ಹಲ್ಲೆ, ಅವಮಾನ ಅದು ಶಾಪವಾಗಿ ತಟ್ಟಿದೆ. ಸಾಕಲು ಕೊಂಡೊಯ್ಯುವ ದನವನ್ನು ತಡೆದು ಹಲ್ಲೆ ನಡೆಸಿ ಅವರ ಕುಟುಂಬದ ಕಣ್ಣೀರು ಸುರಿಸಿದ್ದ ಬಿಜೆಪಿ ಇಂದು ಅದರ ಪರಿಣಾಮವನ್ನು ಅನುಭವಿಸುತ್ತಿದೆ. ಹಿಂದುತ್ವ ಹೆಸರಿನಲ್ಲಿ ಅದೆಷ್ಟು ಮಂದಿಗೆ ಇವರು ಹಲ್ಲೆ ನಡೆಸಿದ್ದಾರೆ ಎಂಬುದನ್ನು ಮೆಲುಕು ಹಾಕಲಿ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಪುತ್ತೂರು ಬಿಜೆಪಿ ಮುಕ್ತವಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸೇರಿದ ಬಿಜೆಪಿ ಕಾರ್ಯಕರ್ತರು: ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಅಭ್ಯರ್ಥಿ ಅಶೋಕ್ ರೈ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ರಾಜೇಂದ್ರ ರೈ ಬೈಲುಗುತ್ತು, ನಾರಾಯಣ ಪೂಜಾರಿ ನೀರ್ ಮಜಲು, ಕುಂಞಣ್ಣ ರೈ ಮಲ್ಲಿಕಟ್ಟೆ, ಜಾನು ನಾಯ್ಕ ನೀರ್ ಮಜಲು, ಸುಂದರ ಸಾಲ್ಯಾನ್, ಚಿದಾನಂದ ಬೈಲಡ್ಕ, ಬಾಲಕೃಷ್ಣ ರೈ ಬೈಲು ಗುತ್ತು
ಮೋಹನ ತೋರಣಕಟ್ಟೆ, ವೆಂಕಪ್ಪ ತೋರಣಕಟ್ಟೆ ಕಾಂಗ್ರೆಸ್ ಸೇರ್ಪಡೆಯಾದರು.