ದಿಲ್ಲಿಯ ಜಂತರ್ ಮಂತರ್‌ನಲ್ಲಿ ಭಯಗ್ರಸ್ತ 'ನಿರ್ಭಯಾ'

Update: 2023-05-06 04:53 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಈ ದೇಶದ ಮಹಿಳೆಯ ಘನತೆ, ಕ್ರೀಡೆಯ ಘನತೆ ಎರಡೂ ಬೀದಿಗೆ ಬಿದ್ದಿವೆೆ. ಒಂದೆಡೆ ಪ್ರಧಾನಿ ಮೋದಿಯವರು ಬಜರಂಗ ಬಲಿಯನ್ನು ಹೊತ್ತುಕೊಂಡು ಕರ್ನಾಟಕದ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಓಡಾಡುತ್ತಿದ್ದರೆ, ಬಜರಂಗಬಲಿಯ ಚೈತನ್ಯವನ್ನು ಸ್ಫೂರ್ತಿಯಾಗಿಸಿಕೊಂಡು ಕುಸ್ತಿಯಲ್ಲಿ ಭಾರತದ ಹೆಸರನ್ನು ದೇಶ, ವಿದೇಶಗಳಲ್ಲಿ ಹರಡಿದ ನಾಡಿನ ಮಹಿಳಾ ಕುಸ್ತಿ ಪಟುಗಳು ನ್ಯಾಯಕ್ಕಾಗಿ ಹಗಲು ರಾತ್ರಿ ಮಳೆ ಚಳಿಯೆನ್ನದೆ ಧರಣಿ ನಡೆಸುತ್ತಿದ್ದಾರೆ. ಮೋದಿಯ ಭಾರತದಲ್ಲಿ ನ್ಯಾಯಕ್ಕಾಗಿ ಕಾರ್ಮಿಕರು, ದಲಿತರು, ರೈತರು ಬೀದಿಗೆ ಬಂದರು. ಇದೀಗ ಅವರ ಜಾಗದಲ್ಲಿ ಈ ದೇಶದ ಹೆಮ್ಮೆಯೆಂದು ಈವರೆಗೆ ಗುರುತಿಸಲ್ಪಟ್ಟಿದ್ದ ಕುಸ್ತಿಪಟುಗಳು ಕುಳಿತಿದ್ದಾರೆ. ಈ ಮಹಿಳಾ ಕುಸ್ತಿ ಪಟುಗಳು ಸರಕಾರದ ಬಳಿ 'ತಮಗೆ ಹೆಚ್ಚಿನ ಗೌರವಧನ ನೀಡಿ, ಸವಲತ್ತು ನೀಡಿ, ಉದ್ಯೋಗ ನೀಡಿ' ಎಂದು ಕೇಳುತ್ತಿರುವುದಲ್ಲ. ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಎಂಬಾತ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಆತನನ್ನು ವಜಾಗೊಳಿಸಿ ಎಂದು ಆಗ್ರಹಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ಒಂದಿಷ್ಟು ಗೌರವಯಿರುವ , ಕ್ರೀಡಾಳುಗಳ ಬಗ್ಗೆ ಒಂದಿಷ್ಟು ಕಾಳಜಿಯಿರುವ ಸರಕಾರ ಈ ದೇಶವನ್ನು ಆಳುತ್ತಿದ್ದರೆ, ಆರೋಪ ಬಂದಾಕ್ಷಣವೇ ಆತನನ್ನು ವಜಾಗೊಳಿಸಿ, ಪ್ರಕರಣವನ್ನು ತನಿಖೆಗೆ ಒಪ್ಪಿಸುತ್ತಿತ್ತು. ಯಾಕೆಂದರೆ, ಇದು ಈ ದೇಶದ ಮಹಿಳೆಯ ಮಾನಕ್ಕೆ ಸಂಬಂಧಿಸಿದ ಪ್ರಶ್ನೆ. ಕ್ರೀಡೆಯ ಅಳಿವು ಉಳಿವಿಗೆ ಸಂಬಂಧಿಸಿದ ಪ್ರಶ್ನೆ. ಆದರೆ ದುರದೃಷ್ಟವಶಾತ್ ದಿಲ್ಲಿಯಲ್ಲಿ ಬೇರೆಯೇ ನಡೆಯುತ್ತಿದೆ. ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಂತೈಸಿ ಅವರ ಬೇಡಿಕೆಗೆ ಕಿವಿಯಾಗುವ ಬದಲು, ಪೊಲೀಸರನ್ನು ಕಳುಹಿಸಿ ಪ್ರತಿಭಟನಾಕಾರರನ್ನು ಬೆದರಿಸುವ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ. ಬುಧವಾರ ತಡರಾತ್ರಿ ಪ್ರತಿಭಟನಾ ನಿರತ ಕ್ರೀಡಾಳುಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಇಬ್ಬರು ಕ್ರೀಡಾಳುಗಳು ಗಾಯಗೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಹಿಂದೆ ರೈತರು ಪ್ರತಿಭಟನೆ ನಡೆಸಿದಾಗಲೂ ಪೊಲೀಸರ ಲಾಠಿಯ ಮೂಲಕ ಅವರನ್ನು ದಮನಿಸುವ ಪ್ರಯತ್ನ ನಡೆದಿತ್ತು. ಆದರೆ ರೈತರು ಅದಕ್ಕೆ ಮಣಿಯದೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರು. ಅಂತಿಮವಾಗಿ ರೈತರಿಗೆ ಸರಕಾರ ಮಣಿಯಬೇಕಾಯಿತು. ಮಹಿಳಾ ಕುಸ್ತಿ ಪಟುಗಳ ಬೇಡಿಕೆ ಅತ್ಯಂತ ಸೂಕ್ಷ್ಮವಾದುದು. ಒಬ್ಬ ರಾಜಕಾರಣಿಯಾಗಿರುವವನು ಮಹಿಳೆಯೊಬ್ಬಳ ಜೊತೆಗೆ ಅಸಭ್ಯವಾಗಿ ವರ್ತಿಸಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. 'ನಿರ್ಭಯಾ' ಪ್ರಕರಣದ ಬಳಿಕ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿತ್ತು. ಮಹಿಳೆಯರ ಸಬಲೀಕರಣಕ್ಕಾಗಿಯೇ ನಿಭರ್ಯಾ ನಿಧಿಯನ್ನು ಸ್ಥಾಪಿಸಲಾಯಿತು. ಇಲ್ಲಿ ಈ ದೇಶದ ಮಹಿಳಾ ಕ್ರೀಡಾಪಟುಗಳ ಮೇಲೆ ರಾಜಕಾರಣಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಮುಖ್ಯವಾಗಿ ಈ ಆರೋಪವನ್ನು ಮಾಡುತ್ತಿರುವವರು, ಈ ದೇಶದ ಹೆಮ್ಮೆಯೆಂದೇ ಗುರುತಿಸಿಕೊಂಡಿರುವ ಅಂತರ್‌ರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳು. ಸರಕಾರ ತನ್ನ ಮಾನ ಉಳಿಸಿಕೊಳ್ಳುವುದಕ್ಕಾಗಿ ಆರೋಪ ಕೇಳಿ ಬಂದಾಕ್ಷಣವೇ ಆರೋಪಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ತನಿಖೆ ನಡೆದು ಆತ ನಿರಪರಾಧಿ ಎಂದು ಕಂಡು ಬಂದರೆ ಮತ್ತೆ ಅದೇ ಸ್ಥಾನವನ್ನು ಅವನಿಗೆ ಮರಳಿಸಬಹುದಿತ್ತು. ಆದರೆ ಸರಕಾರ ಆತ ತನ್ನ ಪಕ್ಷಕ್ಕೆ ಸೇರಿದವನೆನ್ನುವ ಒಂದೇ ಕಾರಣಕ್ಕಾಗಿ ರಕ್ಷಿಸುತ್ತಾ ಬಂತು. ಇದೀಗ ಪ್ರಕರಣ ಬಿಗಡಾಯಿಸಿದೆ. ಎಲ್ಲ ಕುಸ್ತಿಪಟುಗಳು ಬೀದಿಗಿಳಿದಿದ್ದಾರೆ. ಮಹಿಳಾ ಕುಸ್ತಿ ಪಟುಗಳ ಜೊತೆಗೆ ಪುರುಷ ಕುಸ್ತಿಪಟುಗಳೂ ಸೇರಿದ್ದಾರೆ. ಇಷ್ಟಾದರೂ, ಸರಕಾರ ಮಾತ್ರ ಆರೋಪಿಯ ಜೊತೆಗೆ ಬಲವಾಗಿ ನಿಂತಿದೆ. ಒಟ್ಟು ಬೆಳವಣಿಗೆಯಿಂದ, ನಮ್ಮ ಸರಕಾರ ಮಹಿಳೆಯ ಘನತೆ ಮತ್ತು ಈ ದೇಶದ ಅತ್ಲೀಟ್‌ಗಳ ಭವಿಷ್ಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದು ಬಟಾಬಯಲಾಗಿದೆ.

ಲೈಂಗಿಕ ದೌರ್ಜನ್ಯದ ಆರೋಪವಿರುವುದು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷನ ಮೇಲೆ. ಈ ಆರೋಪ ಕೇಳಿ ಬಂದ ಬಳಿಕವೂ ಆತನನ್ನು ಆ ಸ್ಥಾನದಲ್ಲಿ ಸರಕಾರ ಮುಂದುವರಿಸುತ್ತದೆ ಎಂದಾದರೆ, ಮಹಿಳಾ ಕುಸ್ತಿ ಪಟುಗಳು ಆತನ ಕೈಕೆಳಗೆ ಕ್ರೀಡಾ ಸಾಧನೆಯನ್ನು ಮುಂದುವರಿಸುವುದು ಹೇಗೆ ಸಾಧ್ಯ? ಇಂತಹ ಅಧ್ಯಕ್ಷ, ನಾಳೆ ಕ್ರೀಡಾಪಟುಗಳಿಗೆ ಅವಕಾಶದ ಹೆಸರಿನಲ್ಲಿ ಇನ್ನಷ್ಟು ಶೋಷಣೆ ಮಾಡುವ ಸಾಧ್ಯತೆಗಳಿಲ್ಲವೆ? ಮಾನಸಿಕವಾಗಿ ಕೀಳರಿಮೆಯನ್ನು, ಆತಂಕವನ್ನು ಅನುಭವಿಸುತ್ತಾ ಕ್ರೀಡಾಳುಗಳು ಕುಸ್ತಿಯಲ್ಲಿ ಮುಂದುವರಿಯಬೇಕೆ? ಮೊದಲಾದ ಪ್ರಶ್ನೆಗಳು ಎದುರಾಗುತ್ತವೆ. ಇದೇ ಸಂದರ್ಭದಲ್ಲಿ, ದಿಲ್ಲಿ ಪೊಲೀಸರ ದಾಳಿಯನ್ನು ವಿರೋಧಿಸಿ ಹಲವು ಕುಸ್ತಿ ಪಟುಗಳು ತಮಗೆ ಸಿಕ್ಕಿರುವ ಪದವಿ, ಪ್ರಶಸ್ತಿಗಳನ್ನು ಮರಳಿಸುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ತಮಗೆ ಸಿಕ್ಕಿರುವ ಪದಕಗಳನ್ನೇ ಮರಳಿಸುವುದಕ್ಕೆ ಮುಂದಾಗಿರುವುದು ದೇಶದ ಕ್ರೀಡಾ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ. ಸರಕಾರ ಇದಕ್ಕಾಗಿ ನಾಚಿ ಮುಖ ಮುಚ್ಚಿಕೊಳ್ಳಬೇಕು. ಆದರೆ ತನಗೆ ಲಜ್ಜೆಯೆನ್ನುವುದೇ ಇಲ್ಲ ಎನ್ನುವುದನ್ನು ಸರಕಾರ ಈಗಾಗಲೇ ಸಾಬೀತು ಮಾಡಿದೆ. ಪರಿಣಾಮವಾಗಿ, ಸರಕಾರದ 'ಬೆೇಟಿ ಬಚಾವೋ' ಘೋಷಣೆಯ ಬಹುದೊಡ್ಡ ಅಣಕವೊಂದು ಜಂತರ್ ಮಂತರ್‌ನಲ್ಲಿ ನಡೆಯುತ್ತಿದೆ.

ಕ್ರೀಡೆಯಲ್ಲಿ ಮಹಿಳೆಯರು ಪದಕ ಗೆಲ್ಲಬೇಕಾದರೆ ಹತ್ತು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮತ್ತು ಸಂಘರ್ಷಗಳನ್ನು ನಡೆಸಬೇಕಾಗುತ್ತದೆ. ಬೇರೆಲ್ಲ ಕ್ಷೇತ್ರಗಳಲ್ಲಿ ಇರುವಂತೆಯೇ ಕ್ರೀಡಾ ಕ್ಷೇತ್ರದಲ್ಲೂ ಲೈಂಗಿಕ ಶೋಷಣೆಗಳು ವ್ಯಾಪಕವಾಗಿವೆ. ಆದರೆ ಅದನ್ನು ಬಹಿರಂಗ ಪಡಿಸುವಂತಹ ಧೈರ್ಯವನ್ನು ತೋರಿಸುವವರು ಕೆಲವೇ ಕೆಲವರು. ಶೋಷಣೆಯನ್ನು ಬಹಿರಂಗ ಪಡಿಸಿದ್ದೇ ಆದರೆ, ತಮ್ಮ ಕ್ರೀಡಾ ಭವಿಷ್ಯ ಮುರುಟಿ ಹೋಗಬಹುದು ಎನ್ನುವ ಭಯದಿಂದ ಹಲವು ಕ್ರೀಡಾಳುಗಳು ತಮ್ಮ ನೋವುಗಳನ್ನು ನುಂಗಿ ಮುಂದುವರಿಯುತ್ತಾರೆ. ಮಾನಸಿಕ, ದೈಹಿಕ ಒತ್ತಡಗಳ ನಡುವೆ ಅವರು ಕ್ರೀಡೆಯಲ್ಲಿ ಸಾಧನೆಯನ್ನು ಮಾಡಬೇಕಾಗುತ್ತದೆ. ಭಾರತ ಭ್ರಷ್ಟಾಚಾರಕ್ಕಾಗಿ ಕುಖ್ಯಾತಿಯನ್ನು ಪಡೆದಿದೆ.

ಕ್ರೀಡಾ ವಲಯವನ್ನೂ ಈ ಭ್ರಷ್ಟಾಚಾರ ಬಿಡದೆ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಮಹಿಳೆಯರ ಕುರಿತಂತೆ ಪೂರ್ವಾಗ್ರಹವನ್ನು ಹೊಂದಿದ ದೇಶ ಭಾರತ. ಇಲ್ಲಿ ಮಹಿಳೆಯೊಬ್ಬಳು ಕುಸ್ತಿಯಂತಹ ಪುರುಷ ಪ್ರಧಾನ ಕ್ರೀಡೆಯನ್ನು ಆರಿಸಿಕೊಳ್ಳುವುದೇ ಒಂದು ದೊಡ್ಡ ಸಾಧನೆ. ಕುಸ್ತಿಯಲ್ಲಿ ಸಾಧನೆ ಮಾಡಬೇಕಾದರೆ ಮಹಿಳೆ ಮೊದಲು ತನ್ನ ಮನಸ್ಸು ಮತ್ತು ದೇಹದ ಜೊತೆಗೇ ಸಂಘರ್ಷಕ್ಕಿಳಿಯಬೇಕಾಗುತ್ತದೆ. ಮನೆ, ಸಮಾಜದ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಹೀಗೆ ಎಲ್ಲವನ್ನು ಎದುರಿಸಿ ಗೆದ್ದು, ಆ ಬಳಿಕ ಆಕೆ ಕುಸ್ತಿಯ ಕಣದಲ್ಲಿ ಎದುರಾಳಿಯನ್ನು ಎದುರಿಸಬೇಕು. ಇಂತಹ ಸಂದರ್ಭದಲ್ಲಿ ಆಕೆಗೆ ಶಕ್ತಿಯಾಗಿ ನಿಲ್ಲಬೇಕಾಗಿದ್ದ ಭಾರತೀಯ ಕುಸ್ತಿ ಒಕ್ಕೂಟವೇ ಆಕೆಗೆ ಶತ್ರುವಾಗಿ ಪರಿಣಮಿಸಿರುವುದು ಅತ್ಯಂತ ಆಘಾತಕಾರಿ. ಮಹಿಳಾ ಕುಸ್ತಿ ಪಟುಗಳು ಇದೀಗ ಸರಕಾರದ ವಿರುದ್ಧವೇ ಕುಸ್ತಿಗಿಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲ ವಿಭಾಗದ ಮಹಿಳಾ ಮತ್ತು ಪುರುಷ ಕ್ರೀಡಾಳುಗಳು ಅವರ ಪರವಾಗಿ ನಿಲ್ಲಬೇಕಾಗಿದೆ. ಈ ಹೋರಾಟ ಕೆಲವು ಮಹಿಳಾ ಕುಸ್ತಿ ಪಟುಗಳದ್ದಲ್ಲ. ಸರ್ವ ಕ್ರೀಡಾಳುಗಳ ಧ್ವನಿಯಾಗಿ ಅವರು ಬೀದಿಗಿಳಿದಿದ್ದಾರೆ. ಆರೋಪಿಗೆ ಶಿಕ್ಷೆಯಾದರೆ ಅದು ಉಳಿದ ಕ್ರೀಡಾ ವಿಭಾಗಗಳಲ್ಲಿರುವ ಕ್ರಿಮಿಗಳಿಗೆ ಒಂದು ಎಚ್ಚರಿಕೆಯಾಗಬಹುದು. ಮಹಿಳಾ ಕ್ರೀಡಾಳುಗಳು ತಮ್ಮ ಕ್ಷೇತ್ರಗಳಲ್ಲಿ ನಿರಾಳವಾಗಿ ಉಸಿರಾಡುತ್ತಾ ಸಾಧನೆ ಮಾಡುವ ವಾತಾವರಣವೊಂದು ಈ ಹೋರಾಟದ ಮೂಲಕ ಸೃಷ್ಟಿಯಾಗಬಹುದು. ಈ ನಿಟ್ಟಿನಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ಜೊತೆಗೆ ದೇಶದ ಜನತೆ ಕೈ ಜೋಡಿಸಬೇಕು. ದೇಶದ ಮಹಿಳೆಯ ಮಾನ, ಕ್ರೀಡೆಯ ಭವಿಷ್ಯ ಎರಡನ್ನೂ ರಕ್ಷಿಸುವ ಕೆಲಸ ನಡೆಯಬೇಕು.

Similar News