ಮಣಿಪುರ ಹೊತ್ತಿ ಉರಿಯುವಂತೆ ಮಾಡಿದ್ದು ಯಾವ ರಾಜಕೀಯ?

Update: 2023-05-07 07:16 GMT

ಬುಡಕಟ್ಟು ಸಮುದಾಯ ಮತ್ತು ಬುಡಕಟ್ಟುಯೇತರ ಸಮುದಾಯದ ನಡುವೆ ತಾತ್ವಿಕವಾಗಿ ಶುರುವಾದ ಸಂಘರ್ಷ ಇಡೀ ಮಣಿಪುರಕ್ಕೇ ಬೆಂಕಿ ಹೊತ್ತಿಕೊಳ್ಳುವಷ್ಟು ವಿಪರೀತಕ್ಕೆ ಹೋಗಿದ್ದು, ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡಿಕ್ಕುವುದಕ್ಕೆ ಸರಕಾರ ಆದೇಶಿಸಿದ್ದು, ಬುಡಕಟ್ಟು ಪ್ರಾಬಲ್ಯದ ಚುರಾಚಾಂದ್‌ಪುರ, ಕಂಗ್‌ಪೊಕ್ಪಿಮತ್ತು ತೆಂಗ್ನೌಪೋಲ್ ಜಿಲ್ಲೆಗಳು ಹಾಗೂ ಮೇಟಿ ಎಂಬ ಬುಡಕಟ್ಟುಯೇತರ ಸಮುದಾಯದ ಪ್ರಾಬಲ್ಯವಿರುವ ಇಂಫಾಲ ಪಶ್ಚಿಮ, ಕಾಕ್ಚಿಂಗ್, ತೌಬಲ್, ಜಿರಿಬಾಮ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದ್ದು ಎಲ್ಲವೂ ಈಶಾನ್ಯ ರಾಜ್ಯದಲ್ಲಿ ದಿಗಿಲು ಹುಟ್ಟಿಸಿವೆ.

ಬಿಜೆಪಿ ಆಡಳಿತವಿರುವ ಮಣಿಪುರ ಹೊತ್ತಿ ಉರಿದದ್ದು ನೋಡುತ್ತಿದ್ದರೆ ಸಂಕಟವಾಗುತ್ತದೆ. ಅಮಾಯಕ ಬುಡಕಟ್ಟಿನವರನ್ನೂ ನೆಮ್ಮದಿಯಿಂದ ಬದುಕಲು ಬಿಡದೆ, ರಾಜಕೀಯ ಮಾಡುವವರ ಆಟ ಹಲವು ಸಾವು-ನೋವುಗಳಿಗೆ ಕಾರಣವಾಗಿದೆ. ಸದ್ಯ ತಣ್ಣಗಾದಂತೆ ಕಂಡರೂ, ಅದರ ಒಡಲಿನ್ನೂ ಬೇಯುತ್ತಲೇ ಇದೆ ಎಂಬುದನ್ನು ನಿರಾಕರಿಸಲಾಗದು.

ಬುಡಕಟ್ಟು ಸಮುದಾಯ ಮತ್ತು ಬುಡಕಟ್ಟುಯೇತರ ಸಮುದಾಯದ ನಡುವೆ ತಾತ್ವಿಕವಾಗಿ ಶುರುವಾದ ಸಂಘರ್ಷ ಇಡೀ ಮಣಿಪುರಕ್ಕೇ ಬೆಂಕಿ ಹೊತ್ತಿಕೊಳ್ಳುವಷ್ಟು ವಿಪರೀತಕ್ಕೆ ಹೋಗಿದ್ದು, ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡಿಕ್ಕುವುದಕ್ಕೆ ಸರಕಾರ ಆದೇಶಿಸಿದ್ದು, ಬುಡಕಟ್ಟು ಪ್ರಾಬಲ್ಯದ ಚುರಾಚಾಂದ್‌ಪುರ, ಕಂಗ್‌ಪೊಕ್ಪಿಮತ್ತು ತೆಂಗ್ನೌಪೋಲ್ ಜಿಲ್ಲೆಗಳು ಹಾಗೂ ಮೇಟಿ ಎಂಬ ಬುಡಕಟ್ಟುಯೇತರ ಸಮುದಾಯದ ಪ್ರಾಬಲ್ಯವಿರುವ ಇಂಫಾಲ ಪಶ್ಚಿಮ, ಕಾಕ್ಚಿಂಗ್, ತೌಬಲ್, ಜಿರಿಬಾಮ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದ್ದು ಎಲ್ಲವೂ ಈಶಾನ್ಯ ರಾಜ್ಯದಲ್ಲಿ ದಿಗಿಲು ಹುಟ್ಟಿಸಿವೆ.

ಸಣ್ಣ ಪ್ರತಿಭಟನೆಯೊಂದು ಇಷ್ಟು ಮಟ್ಟಿಗೆ ಹೇಗೆ ಹಿಂಸಾಚಾರಕ್ಕೆ ತಿರುಗಿತು? ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿದವರು ಯಾರು? ವಾರದ ಹಿಂದೆಯೇ ಹೊತ್ತಿಕೊಂಡ ಕಿಡಿಯನ್ನು ಸರಕಾರ ಅಲಕ್ಷಿಸಿತೆ ಅಥವಾ ಸರಕಾರದ ಊಹೆಗೂ ಮೀರಿ ಗಂಭೀರ ವಿದ್ಯಮಾನಗಳು ನಡೆದವೆ? ಇವು ಇನ್ನೂ ಉತ್ತರ ಸಿಗಬೇಕಿರುವ ಪ್ರಶ್ನೆಗಳು.

ಇದೆಲ್ಲ ಹೇಗೆ ಶುರುವಾಯಿತೆಂಬುದನ್ನು ನೋಡುವ ಮೊದಲು ಮಣಿಪುರದ ಭೌಗೋಳಿಕ ಸನ್ನಿವೇಶ ಮತ್ತು ಅಲ್ಲಿನ ಸಮುದಾಯಗಳ ಬಗ್ಗೆ ನೋಡಬೇಕು. ಮಣಿಪುರವನ್ನು ಭೌಗೋಳಿಕವಾಗಿ ಗುಡ್ಡಗಾಡು ಮತ್ತು ಕಣಿವೆ ಪ್ರದೇಶಗಳೆಂದು ವಿಂಗಡಿಸಲಾಗಿದೆ. ರಾಜ್ಯದ ಒಟ್ಟು ಪ್ರದೇಶದ ಸುಮಾರು ಶೇ. ೯೦ರಷ್ಟು ಭಾಗವನ್ನು ಹೊಂದಿರುವ ಗುಡ್ಡಗಾಡು ಪ್ರದೇಶಗಳು ಸಾಂಪ್ರದಾಯಿಕವಾಗಿ ನಾಗಾ ಮತ್ತು ಕುಕಿ-ಚಿನ್-ಮಿಜೋ ಅಥವಾ ರೆ ಎಂಬ ಬುಡಕಟ್ಟು ಜನಾಂಗದವರ ನೆಲೆಗಳಾಗಿವೆ. ಇನ್ನು ಕಣಿವೆ ಪ್ರದೇಶಗಳಲ್ಲಿ ಇರುವವರು ಮೇಟಿ ಎಂಬ ಸಮುದಾಯದವರು.

ಇವರನ್ನು ಬುಡಕಟ್ಟುಯೇತರ ಸಮುದಾಯ ಎಂದು ಪರಿಗಣಿಸಲಾಗುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ.೫೩ರಷ್ಟಿರುವ ಮೇಟಿ ಸಮುದಾಯದವರು ಶೇ.೧೦ರಷ್ಟು ಭೂಪ್ರದೇಶದಲ್ಲಿ ನೆಲೆಸಿದ್ದಾರೆ.

ಈಗಿನ ಕಾನೂನಿನ ಪ್ರಕಾರ ಮೇಟಿ ಸಮುದಾಯ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸಲು ಅನುಮತಿ ಇಲ್ಲ. ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿದರೆ, ಬುಡಕಟ್ಟು ಜನಾಂಗದವರು ವಾಸಿಸುವ ಗುಡ್ಡಗಾಡು ಪ್ರದೇಶಗಳಲ್ಲಿ ಮೇಟಿಗಳು ಭೂಮಿ ಖರೀದಿಸಲು ಸಾಧ್ಯವಾಗುತ್ತದೆ. ಬಹುಶಃ ಇದೇ ಕಾರಣದಿಂದ, ಈಚೆಗೆ ಕೆಲ ಸಮಯದಿಂದ ಮೇಟಿ ಸಮುದಾಯದ ಒಂದು ಗುಂಪು ರಾಜ್ಯದ ಬುಡಕಟ್ಟು ಸಮುದಾಯಕ್ಕಿರುವ ಎಸ್‌ಟಿ ಸ್ಥಾನಮಾನ ತನಗೂ ಸಿಗಬೇಕೆಂದು ತೀವ್ರವಾಗಿ ಒತ್ತಾಯಿಸುತ್ತಿದೆ. ಆದರೆ ಬುಡಕಟ್ಟುಯೇತರ ಸಮುದಾಯದವರ ಈ ಬೇಡಿಕೆ ತಮ್ಮ ಸಾಂವಿಧಾನಿಕ ಸುರಕ್ಷತೆಗೆ ಧಕ್ಕೆ ತರಬಹುದು ಎಂಬುದು ಬುಡಕಟ್ಟು ಸಮುದಾಯದವರ ಆತಂಕ. ಹಾಗಾಗಿಯೇ ಮೇಟಿ ಸಮುದಾಯದ ಬೇಡಿಕೆಯನ್ನು ಬುಡಕಟ್ಟು ಸಮುದಾಯ ವಿರೋಧಿಸುತ್ತಿದೆ.

ಈಚೆಗೆ, ಮೇಟಿಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕುರಿತು ಕೇಂದ್ರಕ್ಕೆ ಶಿಫಾರಸು ಕಳಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದಾದ ಬಳಿಕ ಶುರುವಾದ ಪ್ರತಿಭಟನೆಯೇ ಹಿಂಸಾರೂಪಕ್ಕೆ ತಿರುಗಿದ್ದು.

ಮಣಿಪುರದಲ್ಲಿ ಮೇಟಿ ಪ್ರಧಾನ ಜನಾಂಗೀಯ ಗುಂಪು ಮತ್ತು ಕುಕಿ ಸಮುದಾಯ ದೊಡ್ಡ ಬುಡಕಟ್ಟುಗಳಲ್ಲಿ ಒಂದು. ಆದಿವಾಸಿಗಳು ಮತ್ತು ಮೇಟಿ ಸಮುದಾಯದ ನಡುವಿನ ಈ ಸಂಘರ್ಷದಲ್ಲಿ ಅಥವಾ ಸಂಘರ್ಷ ಇಂಥ ಗಂಭೀರ ಸ್ವರೂಪ ಪಡೆಯುವಲ್ಲಿ ಸರಕಾರದ ಪಾತ್ರವೂ ಇದೆಯೇ ಎಂಬ ಪ್ರಶ್ನೆಯೂ ಕಾಡುತ್ತದೆ.

ವಾರದ ಹಿಂದೆ ಏನಾಯಿತು?

ಎಪ್ರಿಲ್ ೨೮ರಂದು ಚುರಾಚಾಂದ್‌ಪುರಕ್ಕೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಭೇಟಿ ನೀಡಿದ ವೇಳೆ, ಮಣಿಪುರದ ಬುಡಕಟ್ಟು ಗುಂಪುಗಳು ೧೨ ಗಂಟೆಗಳ ಸಂಪೂರ್ಣ ಬಂದ್‌ಗೆ ಕರೆಕೊಟ್ಟಿದ್ದವು. ಮೀಸಲು ಅರಣ್ಯ, ಸಂರಕ್ಷಿತ ಅರಣ್ಯಗಳ ಸಮೀಕ್ಷೆ ಮತ್ತು ಹಳ್ಳಿಗಳಿಂದ ಜನರನ್ನು ಹೊರಹಾಕುವ ಕುರಿತ ಸರಕಾರದ ನಿರ್ಧಾರ ವಿರೋಧಿಸಿ ಕರೆನೀಡಲಾದ ಬಂದ್ ಅದಾಗಿತ್ತು. ಕಳೆದ ತಿಂಗಳು ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ರಾಜ್ಯ ಸರಕಾರ ಇಂಫಾಲದಲ್ಲಿ ಚರ್ಚ್‌ಗಳನ್ನು ಕೆಡವಿದ ನಂತರ ಬುಡಕಟ್ಟು ಸಂಘಟನೆಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದವು. ಮಣಿಪುರದ ಪ್ರಮುಖ ಬುಡಕಟ್ಟು ಜನಾಂಗದವರಾದ ಕುಕಿಗಳು ಮತ್ತು ನಾಗಾಗಳು ಕ್ರೈಸ್ತರು.

ಮಣಿಪುರದ ಒಡಲೊಳಗೆ ಬೆಂಕಿ ಹೊತ್ತಿಕೊಳ್ಳಲು ಶುರುವಾದದ್ದೇ ಇಲ್ಲಿಂದ. ಚುರಾಚಾಂದ್‌ಪುರಕ್ಕೆ ಸಿಎಂ ಭೇಟಿಗೆ ಒಂದು ದಿನ ಮೊದಲು ಅಂದರೆ ಎಪ್ರಿಲ್ ೨೭ರಂದು, ಸಿಎಂ ಉದ್ಘಾಟಿಸಬೇಕಿದ್ದ ಜಿಮ್‌ಗೆ ಬೆಂಕಿ ಹಚ್ಚಲಾಯಿತು. ಎಪ್ರಿಲ್ ೨೮ರಂದು ಐದು ದಿನಗಳವರೆಗೆ ಇಂಟರ್ನೆಟ್ ಸೇವೆ ಅಮಾನತು ಜೊತೆಗೆ ಸೆಕ್ಷನ್ ೧೪೪ ವಿಧಿಸಲಾಯಿತು. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ಮಧ್ಯೆ ಘರ್ಷಣೆ ನಡೆಯಿತು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಮೇ ೩ರಂದು, ಎಸ್‌ಟಿ ಪಟ್ಟಿಗೆ ಮೇಟಿ ಸಮುದಾಯವನ್ನು ಸೇರಿಸುವುದನ್ನು ವಿರೋಧಿಸಿ ಮಣಿಪುರದ ‘ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್’ (ಎಟಿಎಸ್‌ಯುಎಂ) ಕರೆನೀಡಿದ್ದ ಬುಡಕಟ್ಟು ಒಗ್ಗಟ್ಟು ಮೆರವಣಿಗೆಯಲ್ಲಿ ೬೦ ಸಾವಿರಕ್ಕೂ ಹೆಚ್ಚು ಮಂದಿ ಇದ್ದರು. ಎಟಿಎಸ್‌ಯುಎಂ ಮೆರವಣಿಗೆಯನ್ನು ವಿರೋಧಿಸಿ ಕಣಿವೆ ಪ್ರದೇಶಗಳಲ್ಲಿಯೂ ಕೆಲವೆಡೆ ಪ್ರತಿಭಟನೆಗಳು ನಡೆದವು. ಆದರೆ, ಎಟಿಎಸ್‌ಯುಎಂ ಮೆರವಣಿಗೆಯ ವಿರುದ್ಧ ತಾನು ಯಾವುದೇ ಪ್ರತಿಭಟನೆಗೆ ಕರೆನೀಡಿಲ್ಲ ಎಂದು ಸ್ವತಃ ಮೇಟಿ ಸಮುದಾಯದ ಪರಿಶಿಷ್ಟ ಪಂಗಡ ಬೇಡಿಕೆ ಸಮಿತಿ ಸ್ಪಷ್ಟಪಡಿಸಿತ್ತು.

ಪ್ರತ್ಯಕ್ಷದರ್ಶಿಗಳು ಹೇಳಿರುವುದನ್ನು ಉಲ್ಲೇಖಿಸಿ ವರದಿಯಾಗಿರುವ ಪ್ರಕಾರ, ಮೆರವಣಿಗೆ ಶಾಂತಿಯುತವಾಗಿಯೇ ಸಾಗಿತ್ತು. ಆದರೆ, ಯಾವಾಗ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ನಲ್ಲಿರುವ ಆಂಗ್ಲೋ ಕುಕಿ ಸ್ಮಾರಕದ ಗೇಟನ್ನು ಕೆಲವು ದುಷ್ಕರ್ಮಿಗಳು ಸುಟ್ಟು ಹಾಕುತ್ತಿದ್ದಂತೆ ಹಿಂಸಾಚಾರ ಭುಗಿಲೆದ್ದಿತು. ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಂಗ್ವಾಯಿ ಪ್ರದೇಶದ ಸುತ್ತಮುತ್ತಲಿನ ಚುರಾಚಾಂದ್‌ಪುರ ಮತ್ತು ಬಿಷ್ಣುಪುರ ಜಿಲ್ಲೆಗಳ ಗ್ರಾಮಸ್ಥರ ನಡುವೆ ಘರ್ಷಣೆಗೆ ಅದು ಕಾರಣವಾಯಿತು. ಮನೆಗಳಿಗೂ ಬೆಂಕಿ ಹಚ್ಚಲಾಯಿತು. ಅಪಾಯದಿಂದ ಪಾರಾಗಲು ಅನೇಕರು ಮನೆಗಳಿಂದ ಕಾಡಿನತ್ತ ಓಡಿದರು.

ಇದಕ್ಕೆ ಪ್ರತೀಕಾರವಾಗಿ ಕೆಲವು ಅಪರಿಚಿತರು ಚುರಾಚಾಂದ್‌ಪುರ ಜಿಲ್ಲೆಯ ನೆರೆಯಲ್ಲಿನ ಬುಡಕಟ್ಟುಯೇತರ ಜನರ ಮೇಲೆ ದಾಳಿ ಮಾಡಿದರೆಂದೂ ವರದಿಯಾಗಿದೆ. ಕಡೆಗೆ ಹಿಂಸಾಚಾರ ರಾಜ್ಯದ ವಿವಿಧ ಭಾಗಗಳಿಗೂ ವ್ಯಾಪಿಸಿತು. ರಾಜಧಾನಿ ಇಂಫಾಲದಲ್ಲಿಯೂ ದಾಳಿಗಳಾದವು. ೨೩ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿ, ಅನೇಕರು ಗಾಯಗೊಂಡಿರುವ ವರದಿಗಳಿವೆ. ಇನ್ನೊಂದೆಡೆ, ಪ್ರತಿಭಟನೆಗಳು ನಡೆಯುತ್ತಿದ್ದಾಗ ಎಕೆ-೪೭ನಂತಹ ಶಸ್ತ್ರಾಸ್ತ್ರ ಹೊಂದಿದ್ದವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿದವು. ಪ್ರತಿಭಟನೆ ನಡುವೆ ಹಾಗೆ ನುಸುಳಿದ್ದವರು ಯಾರೆಂಬುದು ಇನ್ನೂ ಪತ್ತೆಯಾಗಬೇಕಿದೆ.

ಮೇ ೪ರಂದೂ ಇಂಫಾಲದಲ್ಲಿ ಹಿಂಸಾಚಾರದ ಮತ್ತಷ್ಟು ಘಟನೆಗಳು ನಡೆದವು. ಹಿಂಸಾಚಾರ ನಿಯಂತ್ರಿಸಲು ಸೇನೆ, ಸಿಆರ್‌ಪಿಎಫ್, ಅಸ್ಸಾಂ ರೈಫಲ್ಸ್ ಮತ್ತು ರಾಜ್ಯ ಪೊಲೀಸರೊಂದಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜಿಸಲಾಯಿತು. ಸಾವಿರಾರು ಜನರನ್ನು ಹಿಂಸಾಚಾರ ಪೀಡಿತ ಪ್ರದೇಶಗಳಿಂದ ರಕ್ಷಿಸಿದ್ದು, ಬೇರೆಡೆಗೆ ಆಶ್ರಯ ಒದಗಿಸಲಾಯಿತು.

ಈ ಮಧ್ಯೆ, ಮೇಟಿಗಳಿಗೆ ಎಸ್‌ಟಿ ಸ್ಥಾನಮಾನ ಕುರಿತ ಎಪ್ರಿಲ್ ೨೦ರ ತನ್ನ ಆದೇಶ ಟೀಕಿಸಿದ್ದಕ್ಕಾಗಿ ಮಣಿಪುರ ಹೈಕೋರ್ಟ್ ಎಟಿಎಸ್‌ಯುಎಂ ಅಧ್ಯಕ್ಷರು ಮತ್ತು ರಾಜ್ಯ ವಿಧಾನಸಭೆಯ ಹಿಲ್ ಏರಿಯಾಸ್ ಕಮಿಟಿ (ಎಚ್‌ಎಸಿ) ಅಧ್ಯಕ್ಷರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಬಹುಸಂಖ್ಯಾತ ಮೇಟಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಮೇ ೨೯ರೊಳಗೆ ಶಿಫಾರಸು ಮಾಡುವಂತೆ ಹೈಕೋರ್ಟ್ ಆ ಆದೇಶದಲ್ಲಿ ರಾಜ್ಯ ಸರಕಾರಕ್ಕೆ ಸೂಚಿಸಿತ್ತು.

ಕೋರ್ಟ್ ತೀರ್ಪಿನ ವಿರುದ್ಧ ಮುಗ್ಧ ಗುಡ್ಡಗಾಡು ಜನರನ್ನು ಪ್ರಚೋದಿಸಲಾಗುತ್ತಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಬುಡಕಟ್ಟು ಸಮುದಾಯವನ್ನು ಬಹುಶಃ ಅವರು ಕ್ರೈಸ್ತರೆಂಬ ಕಾರಣದಿಂದಲೂ ದಮನಿಸುವ ಯತ್ನಗಳು ಈಶಾನ್ಯ ರಾಜ್ಯದಲ್ಲಿ ನಡೆದಿವೆಯೆ? ಅವರನ್ನು ಬೆದರಿಸುವ, ದಿಕ್ಕಾಪಾಲಾಗಿಸುವ ಉದ್ದೇಶದಿಂದ ಅವರ ಶಾಂತಿಯುತ ಪ್ರತಿಭಟನೆಯ ನಡುವೆ ಬೆಂಕಿ ಭುಗಿಲೇಳುವಂತೆ ಮಾಡಲಾಯಿತೆ? ಇಂಥ ಅನುಮಾನಗಳು ಸಹಜವಾಗಿಯೇ ಏಳುತ್ತಿವೆ.

ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವೇ ಈ ಹಿಂಸಾಚಾರಕ್ಕೆ ಹೊಣೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ರಾಜಕೀಯ ಲಾಭಕ್ಕಾಗಿ ಅಲ್ಲಿನ ಸಮುದಾಯಗಳ ನಡುವೆ ಅಂತರ ಸೃಷ್ಟಿಸಿದ ಬಿಜೆಪಿ ಹಾಗೂ ಬಿರೇನ್ ಸಿಂಗ್ ಅವರ ಸರ್ವಾಧಿಕಾರಿ ಧೋರಣೆ ಈ ಎಲ್ಲ ಅನಾಹುತಕ್ಕೆ ಕಾರಣ ಎಂಬ ವ್ಯಾಪಕ ದೂರು ಕೇಳಿಬಂದಿದೆ.

ಬಿಜೆಪಿ ಆಡಳಿತದ ರಾಜ್ಯದಲ್ಲೇ ಆಗಿರುವ ಇಷ್ಟು ದೊಡ್ಡ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಹೊಣೆ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಧಾನಿ ಕೂಡಲೇ ವಜಾ ಮಾಡಬೇಕು ಎಂದೂ ಕಾಂಗ್ರೆಸ್ ಆಗ್ರಹಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಲ್ಲಿ ಕೋಮು ಗಲಭೆ ಆಗುತ್ತದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳುತ್ತಿದ್ದರೆ, ಅವರದೇ ಸರಕಾರವಿರುವ ಮಣಿಪುರದಲ್ಲಿ ಆದದ್ದೇನು?

Similar News