×
Ad

ಇಂದಿರಾ, ರಾಜೀವ್ ಗಾಂಧಿ ಭಾರತಕ್ಕಾಗಿ ರಕ್ತ ಹರಿಸಿದ್ದನ್ನು ಜನರು ನೋಡಿದ್ದಾರೆ: ಮೋದಿ ವಿರುದ್ಧ ಕಪಿಲ್ ಸಿಬಲ್ ಕಿಡಿ

Update: 2023-05-08 18:44 IST

ಹೊಸದಿಲ್ಲಿ: ಕಾಂಗ್ರೆಸ್ ಅನ್ನು "ರಾಜ ಪರಿವಾರ" ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಸೋಮವಾರ ತಿರುಗೇಟು ನೀಡಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, "ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ದೇಶಕ್ಕಾಗಿ ನೆತ್ತರು ಹರಿಸಿರುವುದನ್ನು ಇಡೀ ದೇಶ ನೋಡಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಬಲ್, "ಪ್ರಧಾನಿ ಹೇಳುತ್ತಾರೆ: ಕಾಂಗ್ರೆಸ್‌ನ ರಾಜ ಪರಿವಾರವು ಕರ್ನಾಟಕವನ್ನು ದೇಶದಿಂದ ವಿಭಜಿಸಲು ಯತ್ನಿಸುತ್ತಿದೆ ಎಂದು. ಆದರೆ, ಮೋದೀಜಿ, ಇಂದಿರಾ ಹಾಗೂ ರಾಜೀವ್ ದೇಶಕ್ಕಾಗಿ ನೆತ್ತರು ಹರಿಸಿರುವುದನ್ನು ದೇಶ ನೋಡಿದೆ. ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿಯ ಪಠ್ಯಪುಸ್ತಕಗಳಿಂದ ಈ ವಾಸ್ತವವನ್ನು ಅಳಿಸಿ ಹಾಕುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಕ್ರಮವಾಗಿ 1984 ಹಾಗೂ 1991ರಲ್ಲಿ ಹತ್ಯೆಗೀಡಾಗಿದ್ದರು.

ರವಿವಾರ ಕರ್ನಾಟಕದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ ಪರಿವಾರವು ಎಲ್ಲ ಮಿತಿಗಳನ್ನು ಮುರಿದು ರಾಷ್ಟ್ರೀಯ ಭಾವನೆಗಳನ್ನು ತುಳಿದು ಹಾಕಲು ಹೊರಟಿದೆ" ಎಂದು ಆರೋಪಿಸಿದ್ದರು.

Similar News