ಪ್ರತಿಕೂಲ ಹವಾಮಾನದ ಕಾರಣಕ್ಕೆ ಭಾರತದ ವಾಯು ಪ್ರದೇಶ ಪ್ರವೇಶಿಸಿದ ಪಾಕ್ ವಿಮಾನ: ವಾಯುಪಡೆಯ ನಿಗಾ

Update: 2023-05-08 13:21 GMT

ಹೊಸದಿಲ್ಲಿ: ಲಾಹೋರ್‌ನಲ್ಲಿ ಭಾರಿ ಮಳೆಯಿಂದ ಪ್ರತಿಕೂಲ ಹವಾಮಾನ ಸೃಷ್ಟಿಯಾಗಿದ್ದರಿಂದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಗದೆ ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸಿದ್ದ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯ ಬೋಯಿಂಗ್ 777 ಜೆಟ್‌ಲೈನರ್ ವಿಮಾನದ ಮೇಲೆ ಭಾರತೀಯ ವಾಯುಪಡೆಯು ತೀವ್ರ ನಿಗಾ ವಹಿಸಿದೆ ಎಂದು ndtv.com ವರದಿ ಮಾಡಿದೆ.

ಮೇ 4ರಂದು 16 ವರ್ಷದಷ್ಟು ಹಳೆಯದಾದ ಬೋಯಿಂಗ್ 777 ವಿಮಾನದ ಮೂಲಕ ಕಾರ್ಯಾಚರಿಸುತ್ತಿದ್ದ ವಿಮಾನ ಸಂಖ್ಯೆ PK-248, ಮಸ್ಕತ್‌ನಿಂದ ಲಾಹೋರ್‌ನ ಅಲ್ಲಮ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ, ಭಾರಿ ಮಳೆಯಿಂದಾಗಿ ಉಂಟಾಗಿದ್ದ ಪ್ರತಿಕೂಲ ಹವಾಮಾನದಿಂದ ತನ್ನ ಭೂಸ್ಪರ್ಶವನ್ನು ಸ್ಥಗಿತಗೊಳಿಸಿತ್ತು.

ದಿಲ್ಲಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಜೆಟ್‌ಲೈನರ್ ವಿಮಾನ ಎದುರಿಸುತ್ತಿರುವ ಪರಿಸ್ಥಿತಿಯ ಕುರಿತು ಮಾಹಿತಿ ನೀಡಲಾಗಿತ್ತು. ಹೀಗಾಗಿ ದಿಲ್ಲಿ ವಾಯು ಸಂಚಾರ ನಿಯಂತ್ರಣ ಕೇಂದ್ರವು ತನ್ನ ವಾಯು ಪ್ರದೇಶದ ಮಾರ್ಗವಾಗಿ ಬಳಸಿಕೊಂಡು ಹೋಗಲು ಮಾಡಿದ ಮನವಿಯನ್ನು ಪುರಸ್ಕರಿಸಿತು ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, "ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನವು ಪ್ರತಿಕೂಲ ಹವಾಮಾನದ ಕಾರಣಕ್ಕೆ ಭಾರತೀಯ ವಾಯು ಪ್ರದೇಶದ ಮೂಲಕ ಹಾದು ಹೋಗಲಿರುವ ಘಟನೆಯನ್ನು ಲಾಹೋರ್ ಹಾಗೂ ದಿಲ್ಲಿ ಪ್ರದೇಶದ ನಿಯಂತ್ರಣ ಕೇಂದ್ರಗಳೊಂದಿಗೆ ಹಂಚಿಕೊಳ್ಳಲಾಗಿತ್ತು ಮತ್ತು ಈ ಕುರಿತು ವಾಯುಪಡೆ ಹಾರಾಟ ಮಧ್ಯವರ್ತಿ ಘಟಕಕ್ಕೆ ಮಾಹಿತಿ ನೀಡಲಾಗಿತ್ತು" ಎಂದು ಹೇಳಲಾಗಿದೆ.

ಭಾರತೀಯ ವಾಯುಪಡೆಯು ಮಧ್ಯಪ್ರವೇಶಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ವರದಿಯಾಗಿದೆ.

Similar News